ಮಂಗಳೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣಕ್ಕೆ (Dharmasthala case) ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ಸತತ 5 ಗಂಟೆ ವಿಚಾರಣೆ ಎದುರಿಸಿದ್ದಾನೆ. ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದಿರುವ ಪೊಲೀಸರು, ಸೋಮವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದಿಬಂದಿದ್ದು, ಮೊಬೈಲ್ ಹಾಗೂ ಯೂಟ್ಯೂಬ್ಗೆ ವೀಡಿಯೊ ಅಪ್ಲೋಡ್ ಮಾಡಿದ್ದ ಲ್ಯಾಪ್ಟಾಪ್ ತರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಸಮೀರ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಹೋಗಿದ್ದರು.
ಆಗಸ್ಟ್ 19ರಂದು ಸಮೀರ್ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಸಮೀರ್ ವಿಚಾರಣೆಗೆ ಸಹಕಾರ ನೀಡಬೇಕು ಎಂದು ಷರತ್ತು ವಿಧಿಸಿತ್ತು.
ಹೀಗಾಗಿ ಭಾನುವಾರ ಮಧ್ಯಾಹ್ನ ಯೂಟ್ಯೂಬರ್ ಸಮೀರ್ ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದ. ಠಾಣೆಗೆ ಬಂದ ಈತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಮೀರ್ ವಾಯ್ಸ್ ಅನ್ನು ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಲಿದ್ದಾರೆ. ಈಗಾಗಲೇ ಪೊಲೀಸರು ಸತತ ಐದು ಗಂಟೆಗಳ ಕಾಲ ಎಐ (AI) ವೀಡಿಯೊ ಪ್ರಕರಣ, ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಪ್ರಕರಣ, ಉಜಿರೆ ಖಾಸಗಿ ಆಸ್ಪತ್ರೆ ಬಳಿ ಗಲಾಟೆ ಸಂಬಂಧ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.