ಮುಂಬೈ: ಮಹಾರಾಷ್ಟ್ರದ ಬೀಡ್ನ ಸರಪಂಚ ಸಂತೋಷ ದೇಶಮುಖ್ ಅವರ ಹತ್ಯೆ ಪ್ರಕರಣದಲ್ಲಿ ಎನ್ಸಿಪಿ ನಾಯಕ ಹಾಗೂ ಸಚಿವ ಧನಂಜಯ ಮುಂಡೆ ಅವರ ಆಪ್ತ ಸಹಾಯಕ ವಾಲ್ಮಿಕ ಕರಾಡ್ ನನ್ನು ಆರೋಪಿ ಎಂದು ಪೊಲೀಸರು ಉಲ್ಲೇಖಿಸಿದ ನಂತರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ಹೇಳಿದ್ದಾರೆ.
ಫಡ್ನವೀಸ್ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದೇವೆಂದ್ರ ಫಡ್ನವೀಸ್, “ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರು ಇಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ನಾನು ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಮತ್ತು ಮುಂದಿನ ಕ್ರಮಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿದ್ದ ಧನಂಜಯ ಮುಂಡೆ, ಬೀಡ್ ಜಿಲ್ಲೆಯ ಪರ್ಲಿಯಿಂದ ಎನ್ಸಿಪಿಯಿಂದ (NCP) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ, ಬೀಡ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.
ಮೂಲಗಳ ಪ್ರಕಾರ, ಸೋಮವಾರ ರಾತ್ರಿ ಉಪಮುಖ್ಯಮಂತ್ರಿ ಅಜಿತ ಪವಾರ್ ಅವರು ಫಡ್ನವೀಸ್ ಅವರನ್ನು ಭೇಟಿಯಾಗಿ ದೇಶಮುಖ್ ಹತ್ಯೆ ಪ್ರಕರಣದಲ್ಲಿ ಸಿಐಡಿಯ ಚಾರ್ಜ್ಶೀಟ್ನ ಪರಿಣಾಮಗಳ ಕುರಿತು ಮತ್ತು ಕರಾಡ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿರುವ ಎರಡು ಸಂಬಂಧಿತ ಪ್ರಕರಣಗಳ ಬಗ್ಗೆ ಚರ್ಚಿಸಿದ್ದಾರೆ. ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಫಡ್ನವೀಸ್ ಧನಂಜಯ್ ಮುಂಡೆ ಅವರಿಗೆ ಸೂಚಿಸಿದ್ದರು ಎಂದು ಮೂಲವೊಂದು ತಿಳಿಸಿದೆ.
ಬೀಡಿನ ಸರಪಂಚ್ ಸಂತೋಷ ದೇಶಮುಖ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಮುಂಡೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಡೆ ಅವರ ಆಪ್ತ ಸಹಾಯಕ ವಾಲ್ಮಿಕ್ ಕರಾಡ್ ಅವರನ್ನು ಬಂಧಿಸಿರುವ ಕಾರಣ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.
ಧನಂಜಯ್ ಮುಂಡೆ ರಾಜೀನಾಮೆ ನೀಡದಿದ್ದರೆ ಸದನದ ಕಲಾಪಕ್ಕೆ ಅಡ್ಡಿಪಡಿಸುವುದಾಗಿ ಪ್ರತಿಪಕ್ಷಗಳು ಘೋಷಿಸಿದ್ದವು.
ಇಂಧನ ಕಂಪನಿಯನ್ನು ಟಾರ್ಗೆಟ್ ಮಾಡಿ ನಡೆದ ಸುಲಿಗೆ ಯತ್ನವನ್ನು ತಡೆಯಲು ಪ್ರಯತ್ನಿಸಿದ್ದಕ್ಕಾಗಿ ಬೀಡ್ನ ಮ್ಯಾಸಜೋಗ್ ಗ್ರಾಮದ ಸರಪಂಚ ದೇಶಮುಖ್ ಅವರನ್ನು ಕಳೆದ ವರ್ಷ ಡಿಸೆಂಬರ್ 9 ರಂದು ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲೆ ಮಾಡಲಾಗಿತ್ತು.
ಫೆಬ್ರವರಿ 27 ರಂದು, ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬೀಡ್ ಜಿಲ್ಲಾ ನ್ಯಾಯಾಲಯದಲ್ಲಿ ದೇಶಮುಖ್ ಹತ್ಯೆ ಮತ್ತು ಸಂಬಂಧಿತ ಎರಡು ಪ್ರಕರಣಗಳನ್ನು ಒಳಗೊಂಡ 1,200 ಪುಟಗಳಿಗಿಂತ ಹೆಚ್ಚಿನ ಚಾರ್ಜ್ಶೀಟ್ ಅನ್ನು ಸಲ್ಲಿಸಿತು.
ಮೂರು ಪ್ರತ್ಯೇಕ ಪ್ರಕರಣಗಳು : ಸರಪಂಚನ ಕೊಲೆ, ಆವಾದ ಕಂಪನಿಯ ಮೇಲೆ ಸುಲಿಗೆ ಯತ್ನ ಮತ್ತು ಕಂಪನಿಯ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಈ ಮೂರು ಪ್ರಕರಣಗಳು ಬೀಡ್ನ ಕೇಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆರೋಪಿಗಳ ವಿರುದ್ಧ ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ ಮೊಕಾ (MCOCA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.