ಮುಂಬೈ : ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಅವರ ಧರ್ಮಪತ್ನಿ ಅಮೃತಾ ಎಲ್ಲರ ಗಮನ ಸೆಳೆದರು. ಹಳದಿ- ಬಂಗಾರ ಬಣ್ಣದ ಸೀರೆಯಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ತಮ್ಮ ಪತಿ ಮೂರನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುತ್ತಿರುವುದನ್ನು ಕಣ್ತುಂಬಿ ಕೊಂಡ ಅವರು ಸಂತಸದ ಕ್ಷಣಗಳನ್ನು ಹಂಚಿಕೊಂಡರು. ದೇವೇಂದ್ರ ಫಡ್ನವಿಸ್ ಅವರು ಆರು ಬಾರಿ ಶಾಸಕರಾಗಿ, ಮೂರು ಬಾರಿ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಬಹಳ ಸಂತಸವಾಗಿದೆ. ಅವರ ಜವಾಬ್ದಾರಿ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಜವಾಯ್ತು ಮಹಾತಾಯಿಯ ಭವಿಷ್ಯ : ದೇವೇಂದ್ರ ಫಡ್ನವಿಸ್ ಅವರ ತಾಯಿ ಸರಿತಾ ಅವರು, ಈ ಬಾರಿ ನನ್ನ ಮಗ ಮುಖ್ಯಮಂತ್ರಿ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಚಾರ ಮಾಡಿದ್ದಾನೆ. ಸದಾ ಪ್ರಚಾರ ಪ್ರಚಾರ ಪ್ರಚಾರ.. ಎನ್ನುತ್ತಿದ್ದ ಆತನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಆದ್ದರಿಂದ ಈ ಸಲ ನನ್ನ ಮಗ ಮುಖ್ಯಮಂತ್ರಿ ಆಗುತ್ತಾನೆ ಎಂದು ಚುನಾವಣಾ ಫಲಿತಾಂಶ ದಿನದಂದು ಮಗನ ಸಾಧನೆ ಬಗ್ಗೆ ಸಂಭ್ರಮಪಟ್ಟು ಆತನೇ ಈ ಬಾರಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಎಂದು ಮುಂಚಿತವಾಗಿಯೇ ಹೇಳಿದ್ದರು. ಆ ಮಹಾತಾಯಿಯ ಮಾತು ಕೊನೆಗೂ ಈಗ ನಿಜವಾಗಿದೆ.
ಕುಶಾಗ್ರಮತಿ, ಮೃದು ಸ್ವಭಾವದ ನಾಯಕ :
ದೇವೇಂದ್ರ ಫಡ್ನವಿಸ್ ಜುಲೈ 22, 1970ರಂದು ಜನಿಸಿದರು. ತಂದೆ ಗಂಗಾಧರರಾವ್ ಫಡ್ನವಿಸ್ ನಾಗ್ಪುರದಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ತಾಯಿ ಸರಿತಾ ಫಡ್ನವಿಸ್ ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ಮಾಜಿ ನಿರ್ದೇಶಕರು. ಗಂಗಾಧರರಾವ್ ಫಡ್ನವೀಸ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ‘ರಾಜಕೀಯ ಗುರು’ ಎಂದು ಕರೆಯುತ್ತಾರೆ.
ಚಿಕ್ಕ ಪ್ರಾಯದಲ್ಲಿ ಮೇಯರ್ ಹುದ್ದೆ: 1992ರಲ್ಲಿ 22 ವರ್ಷದವರಾಗಿದ್ದಾಗ ದೇವೇಂದ್ರ ಫಡ್ನವಿಸ್ ಕಾರ್ಪೊರೇಟರ್ ಆಗುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಚುರುಕು ಬುದ್ಧಿ, ರಾಜಕೀಯ ಹಿತಾಸಕ್ತಿ ಹೊಂದಿದ್ದ ಇವರು 1997ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್ಗೆ ಮೇಯರ್ ಆಗಿ ಆಯ್ಕೆಯಾದರು. ಇದರೊಂದಿಗೆ ‘ಭಾರತದಲ್ಲೇ ಎರಡನೇ ಅತೀ ಚಿಕ್ಕ ಪ್ರಾಯದ ಮೇಯರ್’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1999ರಿಂದ ಸತತವಾಗಿ ನಾಗಪುರವನ್ನು ಪ್ರತಿನಿಧಿಸಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರಾಗಿ ಚುನಾಯಿಸಲ್ಪಟ್ಟರು.
ಮೇಯರ್ ಆಗಿ ಸತತ ಎರಡು ಅವಧಿ ಪೂರ್ಣಗೊಳಿಸಿದ ನಂತರ ಫಡ್ನವೀಸ್ ಅವರನ್ನು 2013ರಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಯಿತು. ಇದು ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು. ಮುಂದೆ, 2014ರಲ್ಲಿ ಮುಖ್ಯಮಂತ್ರಿ ಗಾದಿಗೇರಿದರು.
ಮುಖ್ಯಮಂತ್ರಿಯಾಗಿ ಮೊದಲ ಅವಧಿ: ಫಡ್ನವಿಸ್ ಮೃದುಭಾಷಿ. ದ್ವೇಷವಿಲ್ಲದ ರಾಜಕಾರಣದಿಂದಲೇ ಎಲ್ಲಾ ಪಕ್ಷದವರೊಂದಿಗೂ ಒಡನಾಟವಿಟ್ಟುಕೊಂಡು ಬಂದವರು. ಮುಖ್ಯಮಂತ್ರಿಯಾಗಿ ಅವರ ಮೊದಲ ಅವಧಿಯ ಕೆಲವು ಪ್ರಮುಖ ಸಾಧನೆಗಳ ಪೈಕಿ ಸೇವಾ ಹಕ್ಕು ಕಾಯಿದೆಯೂ ಒಂದು. ಇವರು ಪ್ರಾರಂಭಿಸಿದ ಜಲಯುಕ್ತ ಶಿವರ್ ಅಭಿಯಾನ ರಾಜ್ಯದಾದ್ಯಂತ ಬರಗಾಲವನ್ನು ತೊಡೆದು ಹಾಕುವಲ್ಲಿ ಯಶಸ್ಸು ಕಂಡಿತು. ಈ ಯೋಜನೆಯ ಮೂಲಕ 22,000ಕ್ಕೂ ಹೆಚ್ಚು ಹಳ್ಳಿಗಳ ನೀರಿನ ಸಮಸ್ಯೆ ಬಗೆಹರಿಸಲಾಯಿತು. ಮುಂಬೈ ಮತ್ತು ಪುಣೆ ಮೆಟ್ರೋ ವಿಸ್ತರಣೆ, ನಾಗ್ಪುರ-ಮುಂಬೈ ಸಮೃದ್ಧಿ ಎಕ್ಸ್ಪ್ರೆಸ್ವೇ, ಕರಾವಳಿ ರಸ್ತೆ ಯೋಜನೆ ಮತ್ತು ಮುಂಬೈ ಟ್ರಾನ್ಸ್-ಹಾರ್ಬರ್ನಂತಹ ಯೋಜನೆಗಳಿಗೆ ಶಕ್ತಿ ತುಂಬಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ರಾಜಕೀಯ ತಂತ್ರಗಾರಿಕೆ ಮತ್ತು ಪ್ರಾಯೋಗಿಕ ವಿಧಾನಕ್ಕೆ ಹೆಸರುವಾಸಿಯಾದ ಫಡ್ನವಿಸ್, 2022ರಲ್ಲಿ ಮಹಾರಾಷ್ಟ್ರ ತೀವ್ರ ರಾಜಕೀಯ ವಿಪ್ಲವ ಎದುರಿಸುತ್ತಿದ್ದ ಸಮಯದಲ್ಲಿ ರಾಜಕೀಯ ಬುದ್ಧಿವಂತಿಕೆ ತೋರ್ಪಡಿಸಿದ್ದನ್ನು ಮರೆಯುವಂತಿಲ್ಲ. ಮೂರು ವರ್ಷದ ಹಿಂದೆ ಶಿವಸೇನೆ ವಿಭಜನೆಯಾದಾಗ ಏಕನಾಥ್ ಶಿಂಧೆ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.
ಮುಖ್ಯಮಂತ್ರಿಯಾಗಿ 2ನೇ ಅವಧಿ: ನವೆಂಬರ್ 2019ರಲ್ಲಿ, ಫಡ್ನವೀಸ್ ಮಹಾರಾಷ್ಟ್ರದ ಸಿಎಂ ಆಗಿ 2ನೇ ಅವಧಿಗೆ ಆಯ್ಕೆಯಾದರು. ಕೇವಲ ಮೂರು ದಿನಗಳ ಕಾಲ ಮಾತ್ರ ಅಧಿಕಾರ ವಹಿಸಿಕೊಂಡ ಅವರು, ರಾಜಕೀಯ ಕಾರಣಗಳಿಂದಾಗಿ ರಾಜೀನಾಮೆ ನೀಡಬೇಕಾಯಿತು. ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಅತೀ ಕಡಿಮೆ ಅವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿದ್ದರು ಎಂಬುದು ಇಲ್ಲಿ ಗಮನಾರ್ಹ. 2018 ಮೇ 17ರಂದು ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ, ಮೂರು ದಿನಗಳ ಕಾಲ ಮಾತ್ರ ಅಧಿಕಾರದಲ್ಲಿದ್ದರು.
ಫಡ್ನವಿಸ್ ಅವರ ಇತರೆ ವಿಶೇಷತೆಗಳು:
‘ಸಂಯುಕ್ತ ಮಹಾರಾಷ್ಟ್ರ’ದ ಇತಿಹಾಸದಲ್ಲಿ, ಫಡ್ನವಿಸ್ ಎರಡನೇ ಮುಖ್ಯಮಂತ್ರಿಯಾಗಿದ್ದು, ದಿವಂಗತ ವಸಂತರಾವ್ ಫುಲ್ಸಿಂಗ್ ನಾಯಕ್ ನಂತರ 2014ರಿಂದ 2019ರವರೆಗೆ ಪೂರ್ಣಾವಧಿ ಮುಗಿಸಿದ್ದಾರೆ. ನಾಯಕ್ 1962ರಿಂದ 1967ರ ನಡುವೆ ಈ ಸಾಧನೆ ಮಾಡಿದ ಏಕೈಕ ಸಿಎಂ ಆಗಿದ್ದಾರೆ. ಯಶವಂತರಾವ್ ಚವ್ಹಾಣ್, ಶಂಕರರಾವ್ ಚವ್ಹಾಣ್, ವಸಂತದಾದಾ ಪಾಟೀಲ್, ಬ್ಯಾರಿಸ್ಟರ್ ಎ.ಆರ್.ಅಂತುಲೆ, ಮನೋಹರ್ ಜೋಶಿ ಮತ್ತು ಶರದ್ ಪವಾರ್ ಸೇರಿದಂತೆ ಮುಂತಾದ ನಾಯಕರು ರಾಜಕೀಯ ಅಸ್ಥಿರತೆಯ ಕಾರಣಗಳಿಂದ ಇದನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಮನೋಹರ್ ಜೋಶಿ ನಂತರ ಫಡ್ನವೀಸ್ ಬ್ರಾಹ್ಮಣ ಸಮುದಾಯದ ಏಕೈಕ ಸಿಎಂ.
ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ಏಕೈಕ ಉಪಮುಖ್ಯಮಂತ್ರಿ ಕೂಡ ಫಡ್ನವಿಸ್.
44ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಫಡ್ನವಿಸ್, ಶರದ್ ಪವಾರ್ ನಂತರ ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಬಿರುದು ಹೊಂದಿದ್ದಾರೆ.
ವೈಯಕ್ತಿಕ ಜೀವನ: ದೇವೇಂದ್ರ ಫಡ್ನವಿಸ್ ಅವರು ಬ್ಯಾಂಕರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಅಮೃತಾ ಫಡ್ನವಿಸ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ದಿವಿಜಾ ಫಡ್ನವಿಸ್ ಎಂಬ ಪುತ್ರಿ ಇದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್: ಫಡ್ನವಿಸ್ಗೆ ‘ಎಕ್ಸ್’ ಖಾತೆಯಲ್ಲಿ 59 ಲಕ್ಷ, ಫೇಸ್ಬುಕ್ನಲ್ಲಿ 91 ಲಕ್ಷ, ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ, ಯೂಟ್ಯೂಬ್ನಲ್ಲಿ 11 ಲಕ್ಷ ಹಿಂಬಾಲಕರು ಮತ್ತು ವಾಟ್ಸ್ಆ್ಯಪ್ ಚಾನೆಲ್ನಲ್ಲಿ 55,000 ಫಾಲೋವರ್ಸ್ ಹೊಂದಿದ್ದಾರೆ. ಇದರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಮಹಾರಾಷ್ಟ್ರದ ‘ಅತೀ ಹೆಚ್ಚು ಅನುಸರಿಸುವ’ ರಾಜಕಾರಣಿಯಾಗಿಯೂ ಹೊರಹೊಮ್ಮಿದ್ದಾರೆ.
ವಸಂತರಾವ್ ನಾಯಕ್ ಅವರು 11 ವರ್ಷಗಳ ಅಧಿಕಾರಾವಧಿಯೊಂದಿಗೆ ಮಹಾರಾಷ್ಟ್ರದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.