ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಈಗ ರಾಜ್ಯದ ಮಂತ್ರಿಯಾಗಿರುವುದರಿಂದ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸೋಣ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಚ್ಚುವರಿ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಹಿರೇಬಾಗೇವಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರು ಇಡೀ ಕ್ಷೇತ್ರವನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದಾರೆ. ಜಾತಿ, ಪಕ್ಷ, ಪ್ರದೇಶ ಯಾವುದೇ ಭೇದ ಭಾವ ಮಾಡದೆ ಎಲ್ಲರನ್ನೂವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರೂ ಅವರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದಾರೆ. ಇಡೀ ಕ್ಷೇತ್ರದ ಜನರೊಂದಿಗೆ ನಾವೆಲ್ಲ ಒಂದೇ ಕುಟುಂಬದ ಸದಸ್ಯರ ರೀತಿಯಲ್ಲಿ ಇದ್ದೇವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಕ್ಷೇತ್ರದ ಜನರ ಸಲಹೆ, ಮಾರ್ಗದರ್ಶನ ಅಗತ್ಯವಾಗಿದೆ. ಹಾಗಾಗಿ ಎಲ್ಲರನ್ನೂವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದು ಚನ್ನರಾಜ ತಿಳಿಸಿದರು.
ಈ ಸಮಯದಲ್ಲಿ ವೇದಮೂರ್ತಿ ಶ್ರೀ ರಾಚಯ್ಯ ಅಜ್ಜನವರು, ಗ್ರಾಮದ ಹಿರಿಯರು, ಸಿದ್ದು ಚಾಪಗಾಂವ, ವಿಠ್ಠಲ ಅರ್ಜುನವಾಡ, ಮಂಜು ಅಕ್ಕನವರ, ಬಸವಂತ ನಾಯ್ಕ, ಯಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಮುಶೆಪ್ಪ ಹಟ್ಟಿ, ಪಡೆಪ್ಪ ಅಂಕಲಗಿ, ಪಿಂಟು, ಜಿಲ್ಲಾ ಮತ್ತು ತಾಲೂಕಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.