ಬೆಳಗಾವಿ: ಖಾನಾಪುರ ತಾಲೂಕಿನ ಕಾಡಂಚಿನ ಜನರ ಸಮಸ್ಯೆ ಬಗ್ಗೆ ಅರಣ್ಯ ಸಚಿವರ ಬಳಿ ನಿಯೋಗ ಕೊಂಡೊಯ್ಯಲಾಗುವುದು. ಭೀಮಗಡ ವನ್ಯಧಾಮದ ಗ್ರಾಮಗಳ ಜನತೆಯ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಮೊದಲ ಸಭೆ ಯಶಸ್ವಿಯಾಗಿದೆ. ಮಹತ್ವದ ಚರ್ಚೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ತಿಳಿಸಿದರು.
ಭೀಮಗಡ ವನ್ಯಧಾಮದ ಪರಿಸರದ ಜನರ ಸಮಸ್ಯೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಅಭಯಾರಣ್ಯದಿಂದ ಮುಖ್ಯವಾಹಿನಿಗೆ ಬರಲು ಇಚ್ಚಿಸುವ ಕಾಡಿನ ಜನರಿಗೆ ಸರ್ಕಾರದಿಂದ ಮೂಲ ಸೌಲಭ್ಯ ಒದಗಿಸುವುದು ಸೇರಿ ಭೀಮಗಡ ವನ್ಯಧಾಮದ ಜನರ ಸ್ಥಳಾಂತರದ ಮಾಹಿತಿ ಕ್ರೋಡೀಕರಿಸಲು ಸಭೆ ಆಯೋಜಿಸಿದ್ದು, ಸಭೆಯಲ್ಲಿ ಭಾಗವಹಿಸಿದ್ದ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು, ತಾಲೂಕಿನ ವಿವಿಧ ಪಕ್ಷಗಳು ಮತ್ತು ಕ್ಷೇತ್ರಗಳ ಗಣ್ಯರು ಸ್ಥಳಾಂತರಕ್ಕೆ ಒಪ್ಪುವ ಗ್ರಾಮಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಒದಗಿಸಬೇಕು, ಸ್ಥಳಾಂತರಕ್ಕೆ ಒಪ್ಪದವರ ಗ್ರಾಮಗಳಿಗೆ ರಸ್ತೆ, ಸೇತುವೆ ಒದಗಿಸುವ ಬಗ್ಗೆ ಪ್ರಯತ್ನ ನಡೆಯಬೇಕು ಎಂದು ಹೇಳಿದರು.
ಭೀಮಗಡ ವನ್ಯಧಾಮದ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಚೊಚ್ಚಲ ಸಭೆ ಫಲಪ್ರದವಾಗಿದೆ. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಒಟ್ಟಾರೆ ಜನರ ಸಮಸ್ಯೆ ನಿವಾರಣೆ ಕುರಿತು ಶಕ್ತಿಮೀರಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದರು.
ಜನಪ್ರತಿನಿಧಿಗಳು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.