ಬೆಂಗಳೂರು:
“ದೇವನೊಬ್ಬ ನಾಮ ಹಲವು, ಧರ್ಮ ಹಲವು ತತ್ವವೊಂದೆ, ನಾಮ ನೂರಾದರೂ ದೈವವೊಂದೇ ಪೂಜೆ ಯಾವುದಾದರೂ ಭಕ್ತಿಯೊಂದೆ. ಹೀಗಾಗಿ ನಾವೆಲ್ಲ ವಿಶ್ವಮಾನವ ತತ್ವವನ್ನು ಅನುಸರಿಸಬೇಕು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಸಂಘಟನೆಯ 50 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
“ನಾನು ನನ್ನ ರಾಜಕೀಯ ಜೀವನ ಪ್ರಾರಂಭ ಮಾಡಿದ್ದೇ ವಿದ್ಯಾರ್ಥಿ ನಾಯಕನಾಗಿ. ವಿದ್ಯಾರ್ಥಿ ನಾಯಕರಾಗಿ ಬೆಳೆದವರೇ ಇಂದು ಉನ್ನತ ಸ್ಥಾನಗಳಲ್ಲಿ ಇದ್ದಾರೆ, ವಿದ್ಯಾರ್ಥಿಗಳೇ ಈ ದೇಶದ ಭವಿಷ್ಯ” ಎಂದರು.
“ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಎಸ್ಎಸ್ಎಫ್ ನಂತಹ ಶಿಸ್ತಿನ ವಿದ್ಯಾರ್ಥಿ ಸಂಘಟನೆ ನೋಡಿಲ್ಲ. ನಾನು ಇಲ್ಲಿಗೆ ರಾಜ್ಯದ ಉಪಮುಖ್ಯಮಂತ್ರಿ ಆಗಿ ಬಂದಿಲ್ಲ, ವಿದ್ಯಾರ್ಥಿ ನಾಯಕನಾಗಿ ಬಂದಿದ್ದೇನೆ. ನಾನು ನಿಂತಹ ಸ್ಥಾನದಲ್ಲಿ ನಿಮ್ಮನ್ನು ಕಾಣಲು ಬಯಸುತ್ತೇನೆ” ಎಂದು ಹೇಳಿದರು.
“ಮತ್ತೆ ಈ ದೇಶದಲ್ಲಿ ಶಾಂತಿ, ಸೌಹಾರ್ದತಾ ಮನೋಭಾವ ಮೂಡಿಸಬೇಕು. ಅದಕ್ಕೆ ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ. ನಿಮ್ಮ ಸಂಘಟನೆಯ ಜೊತೆ ನಾವಿದ್ದೇವೆ. ನಮ್ಮೆಲ್ಲರ ಉದ್ದೇಶ ಒಂದೇ ಆದರೆ ದಾರಿಗಳು ಬೇರೆ. ನಮ್ಮ ದಾರಿಗಳು ಒಂದೇ ಗುರಿಯನ್ನು ತಲುಪುವಂತೆ ಕೆಲಸ ಮಾಡೋಣ” ಎಂದು ಕರೆ ನೀಡಿದರು.
“ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ಸದಾ ತೆರೆದಿರುತ್ತದೆ. ಯಾವುದೇ ಸಂಕಷ್ಟದ ಸಂದರ್ಭಗಳಲ್ಲಿ ನಾವು ಜೊತೆಗಿರುತ್ತೇವೆ” ಎಂದು ಪುನರುಚ್ಚರಿಸಿದರು.