ಬೆಂಗಳೂರು :
ನಿತ್ಯ 12,500 ಕ್ಯೂಸೆಕ್ಸ್ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ತಿರಸ್ಕಾರ ಮಾಡಿದ್ದು ಸಂತಸ ತಂದಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನಿತ್ಯ 3000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಬಳಿಕ ಸದಾಶಿವನಗರದ ನಿವಾಸದ ಬಳಿ ಮಂಗಳವಾರ ಸಂಜೆ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
12,500 ಕ್ಯೂಸೆಕ್ಸ್ ನೀರಿಗೆ ತಮಿಳುನಾಡು ಬೇಡಿಕೆ ಇಟ್ಟಿತ್ತು. 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮಿತಿಗೆ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡ ಸಮಿತಿಗೆ ಧನ್ಯವಾದ ಎಂದರು.
ಇಂತಹ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆಯಿಂದ 66 ಟಿಎಂಸಿ ನೀರು ಅವರಿಗೆ ಸೇರುತ್ತದೆ. ಕೆಆರ್ಎಸ್, ಕಬಿನಿ, ಹೇಮಾವತಿ ಆಣೆಕಟ್ಟೆಗಳ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ. ಕಳೆದ ವಾರ ಸುಪ್ರೀಂಕೋರ್ಟ್ ತೀರ್ಪು ನೀಡುವ ಹೊತ್ತಿನಲ್ಲಿ ” ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ, ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ” ಎಂದು ಸ್ಪಷ್ಟವಾಗಿ ಹೇಳಿದೆ.
ಮೇಕೆದಾಟು ಅಣೆಕಟ್ಟು ನೀರನ್ನು ಕನಕಪುರದವರು ಬಳಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಅಣೆಕಟ್ಟು ಇರುವುದೇ ತಮಿಳುನಾಡು ಗಡಿಯಲ್ಲಿ ಎಂದು ಛೇಡಿಸಿದರು.
ಕಾವೇರಿ ನೀರಿನ ಎರಡೂ ಸಮಿತಿಗಳಿಗೆ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ಮತ್ತೊಮ್ಮೆ ಭರವಸೆ ಮೂಡಿದೆ, ಆದ ಕಾರಣ ನಮ್ಮ ಸಂಸದರು, ಕೇಂದ್ರ ಸಚಿವರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತೇನೆ.”
“ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ.29 ರ ಬಂದ್ಗೆ ಅವಕಾಶವಿಲ್ಲ” ಎಂದರು.
“ಕಾವೇರಿ ಹೋರಾಟದ ಜೊತೆಗೆ ರಾಜಕೀಯ ಟೀಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ “ಟೀಕೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಅವರು ತಮ್ಮ ಅಸ್ತಿತ್ವಕ್ಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಪ್ರಜಾಪ್ರಭುತ್ವದ ಹಕ್ಕನ್ನು ನಾವು ಪ್ರಶ್ನಿಸಬಾರದು. ಮಾಧ್ಯಮಗಳು ಸಹ ನಮ್ಮ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಾರೆ, ಇದೆಲ್ಲಾ ರಾಜಕೀಯದ ಒಂದು ಭಾಗ” ಎಂದು ಉತ್ತರಿಸಿದರು.
ನಿಮ್ಮ ಆಡಳಿತವಾಧಿಯಲ್ಲಿ ಮೇಕೆದಾಟು ಯೋಜನೆ ಆಗುತ್ತದೆಯೇ ಎನ್ನುವ ಪ್ರಶ್ನೆಗೆ “ಕಾಲವೇ ಉತ್ತರ ಕೊಡುತ್ತದೆ” ಎಂದರು.
ಜಯನಗರದ ಶಾಸಕರ ನೇತೃತ್ವದಲ್ಲಿ ದಾಂಧಲೆ ನಡೆದಿದೆ ಎನ್ನುವ ಪ್ರಶ್ನೆಗೆ “ಸಾರ್ವಜನಿಕರ ಆಸ್ತಿ ಹಾನಿ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇದನ್ನು ಮಾಡುವುದಿಲ್ಲ, ನ್ಯಾಯಾಲಯ ಮಾಡುತ್ತದೆ. ಬಂದ್ ಮಾಡುವ ಮುಂಚಿತವಾಗಿ ಸೂಚನೆಯನ್ನೂ ನೀಡಿದೆ.
ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ರಾಜ್ಯದ ಜನರೆಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡೋಣ” ಎಂದರು.
ಇಂದು (ಸೆ.26) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ಅ.15 ರ ತನಕ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಶಿಫಾರಸ್ಸು ಮಾಡಿದೆ.