ಬೆಂಗಳೂರು :
“ಜನರ ಅಹವಾಲುಗಳನ್ನು ತ್ವರಿತ ವಿಲೇವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆ.ಆರ್ ಪುರದಲ್ಲಿ ಬುಧವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು ಹೇಳಿದ್ದಿಷ್ಟು;
“ಇಂದು ಕೇವಲ ಡಿ.ಕೆ. ಶಿವಕುಮಾರ್ ಮಾತ್ರ ಈ ಜನರ ಮನೆ ಬಾಗಿಲಿಗೆ ಬಂದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳ ಸಮೇತ, ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಮೇತ ಇಡೀ ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ಕರೆತರಲಾಗಿದೆ.
ಕೆ ಆರ್ ಪುರ ಮತ್ತು ಮಹದೇವಪುರ ಎರಡೂ ಕ್ಷೇತ್ರಗಳ ಜನರು ಬಹಳ ಉತ್ಸುಕತೆಯಿಂದ ಬಂದು ತಮ್ಮ ಅಹವಾಲು ಸಲ್ಲಿಸಿದ್ದಾರೆ. ಜನ ಅಧಿಕಾರಿಗಳ ಕೈಗೆ ತಮ್ಮ ಅರ್ಜಿ ನೀಡಲು ಬಯಸುತ್ತಿಲ್ಲ. ತಾವೇ ಖುದ್ದಾಗಿ ನನಗೆ ಅರ್ಜಿ ಸಲ್ಲಿಸಬೇಕು ಎಂದು ಸರದಿ ಸಾಲಿನಲ್ಲಿ ಬಂದಿದ್ದಾರೆ.
ಎಲ್ಲ ಅರ್ಜಿಗಳನ್ನು ಒಂದೇ ದಿನ ಪರಿಹಾರ ಮಾಡಲು ಆಗುವುದಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಸ್ವಚ್ಛತೆ ಕುರಿತ ದೂರುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಇದರ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು.
ವೈಯಕ್ತಿಕ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅವರ ಸಮಸ್ಯೆಗೆ ಪರಿಹಾರ ನೀಡಲಾಗುವುದು.
ಇಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಮತ್ತು ಪಿಂಚಣಿ ಸಮಸ್ಯೆ ವಿಚಾರವಾಗಿ ದೂರುಗಳು ಬಂದಿವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವರು ತಮ್ಮ ಗಂಡನ ಮೊಬೈಲ್ ಹಾಗೂ ಖಾತೆ ಸಂಖ್ಯೆ ನಮೂದಿಸಿದ್ದಾರೆ. ಹೀಗಾಗಿ ಅವರಿಗೆ ಯೋಜನೆ ಫಲ ಸಿಕ್ಕಿಲ್ಲ. ಅದನ್ನು ಸರಿಪಡಿಸಲು ಸೂಚಿಸಿದ್ದೇನೆ.
ಈ ಎರಡೂ ಕ್ಷೇತ್ರಗಳ ಶಾಸಕರು ಪ್ರತ್ಯೇಕವಾಗಿ ತಮ್ಮ, ತಮ್ಮ ಮನವಿ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಉಳಿದಂತೆ ಬೇರೆ ಮನವಿಗಳನ್ನು ಹಂತ, ಹಂತವಾಗಿ ಬಗೆಹರಿಸಲಾಗುವುದು.”
ಈ ಅರ್ಜಿಗಳನ್ನು ಎಷ್ಟು ದಿನಗಳಲ್ಲಿ ಇತ್ಯರ್ಥ ಮಾಡಲಾಗುವುದು ಎಂದು ಕೇಳಿದಾಗ, “ಎಲ್ಲವನ್ನೂ ಒಂದೇ ದಿನದಲ್ಲಿ ಬಗೆಹರಿಸಲು ಆಗುವುದಿಲ್ಲ. ಕೆಲವು ದೂರುಗಳಲ್ಲಿ ಕಾನೂನು ಸಮಸ್ಯೆಗಳಿರುತ್ತವೆ. ನಾನು 35 ವರ್ಷಗಳಿಂದ ಅನೇಕ ಗ್ರಾಮ ಸಭೆಗಳನ್ನು ನಡೆಸಿ ಅನುಭವವಿದೆ. ನ್ಯಾಯಬದ್ಧವಾಗಿರುವ ಎಲ್ಲ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡುತ್ತಾರೆ. ಖಾತೆ, ಪಿಂಚಣಿ ಸೇರಿದಂತೆ ವೈಯಕ್ತಿಕ ಅಹವಾಲುಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು” ಎಂದು ತಿಳಿಸಿದರು.
ಕೆಲವರು ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದನ್ನು ಕೇಳಿದಾಗ, “ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ಹಾಗೂ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ದೂರು ಬಂದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.