ಬೆಂಗಳೂರು :
ಸರ್ಕಾರದಿಂದ ಮಾನ್ಯತೆ ನವೀಕರಣ ಮಾಡಿಕೊಳ್ಳದ 129 ಖಾಸಗಿ ಪ್ರೌಢಶಾಲೆಗಳಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆ ಹಿಡಿದಿದೆ. ಈಗಾಗಲೇ ರಾಜ್ಯದಲ್ಲಿ ಮಾನ್ಯತೆ ನವೀಕರಿಸಿಕೊಂಡಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರು ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಶಾಲೆಗಳ ಆಡಳಿತ ಮಂಡಳಿಗಳು ಅಂತಿಮ ಪ್ರವೇಶ ಪತ್ರ ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ಮಾನ್ಯತೆ ನವೀಕರಣ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಆ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶಾಲೆಗಳಿಗೆ ಮಂಡಳಿಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. 129 ಶಾಲೆಗಳ ಪೈಕಿ ಅತಿ ಹೆಚ್ಚು 36 ಶಾಲೆಗಳು ಬೆಂಗಳೂರು ದಕ್ಷಿಣದಲ್ಲೇ ಇವೆ. ಉಳಿದ ಶಾಲೆಗಳು ಬೆಂ.ಉತ್ತರ, ತುಮಕೂರು, ಶಿವಮೊಗ್ಗ ಮತ್ತಿತರ ಜಿಲ್ಲೆಗಳ ಶಾಲೆಗಳಾಗಿವೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.