ಹೈದರಾಬಾದ್: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಡಳಿತಾರೂಢ ತೆಲುಗು ದೇಶಂ ಪಕ್ಷದ(ಟಿಡಿಪಿ) ಒಳಗೆ ಒತ್ತಡ ಹೆಚ್ಚಾಗಿದೆ.
ಇತ್ತೀಚೆಗೆ ಲೋಕೇಶ್ ನೇತೃತ್ವದಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನದಲ್ಲೂ ಈ ಬೇಡಿಕೆ ಭುಗಿಲೆದ್ದಿದೆ. ಈ ಅಭಿಯಾನ 1 ಕೋಟಿ ಸದಸ್ಯತ್ವವನ್ನು ಪಕ್ಷ ಮಾಡಿಕೊಂಡಿದೆ. ಲೋಕೇಶ್ ಅವರನ್ನು ಭವಿಷ್ಯದ ನಾಯಕನೆಂದು ಬಿಂಬಿಸುವ ಸಮಯ ಬಂದಾಗಿದೆ ಎಂದೂ ಅವರು ಹೇಳಿದ್ದಾರೆ.
ಟಿಡಿಪಿ ಮೂಲಗಳ ಪ್ರಕಾರ, ಲೋಕೇಶ್ ಅವರನ್ನು ಉಪಮುಖ್ಯಮಂತ್ರಿ ಮಾಡುವ ವಿಚಾರವನ್ನು ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ನಾಯ್ಡು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ನಾಯ್ಡು ಉಪಸ್ಥಿತರಿದ್ದ ಕಡಪ ಜಿಲ್ಲೆಯ ಮೈದುಕೂರಿನಲ್ಲಿ ನಡೆದ ಸಭೆಯಲ್ಲಿ ಟಿಡಿಪಿಯ ಹಿರಿಯ ಮುಖಂಡ ಶ್ರೀನಿವಾಸ್ ರೆಡ್ಡಿ ಅವರು, ಯುವಕರು ಮತ್ತು ಪಕ್ಷದ ಬೆಂಬಲಿಗರಲ್ಲಿ ವಿಶ್ವಾಸ ಮೂಡಿಸಲು ಲೋಕೇಶ್ ಅವರನ್ನು ಉನ್ನತ ಸ್ಥಾನಕ್ಕೆ ಏರಿಸುವಂತೆ ಸಿಎಂಗೆ
ಬೇಡಿಕೆ ಇಟ್ಟಿದ್ದರು.
ನಾರಾ ಲೋಕೇಶ್ ಸದ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಐಟಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಜನಸೇನಾ ವರಿಷ್ಠ ಪವನ್ ಕಲ್ಯಾಣ್ ಅವರು ಸರ್ಕಾರದ ಏಕೈಕ ಉಪಮುಖ್ಯಮಂತ್ರಿಯಾಗಿದ್ದಾರೆ.
ಲೋಕೇಶ್ಗೆ ಉನ್ನತ ಹುದ್ದೆ ನೀಡಲು ಪಕ್ಷದಲ್ಲಿ ಒತ್ತಡವಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಕೆ. ರಘು ರಾಮಕೃಷ್ಣ ರಾಜು ಹೇಳಿದ್ದಾರೆ.
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಲೋಕೇಶ್ ಅವರನ್ನು ಡಿಸಿಎಂ ಹುದ್ದೆಯಲ್ಲಿ ನೋಡಲು ಆಶಿಸುತ್ತಿದ್ದಾರೆ’ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಅವರಿಗೆ ಸಮನಾಗಿ ಲೋಕೇಶ್ ಅವರಿಗೆ ಉನ್ನತ ಹುದ್ದೆ ನೀಡಿದರೆ ಜನಸೇನಾ ಪಕ್ಷಕ್ಕೆ ಕೊಂಚ ಕಳವಳ ಉಂಟಾಗಬಹುದು. ಆದರೆ, ಅಂತಿಮ ನಿರ್ಧಾರ ಮುಖ್ಯಮಂತ್ರಿ ನಾಯ್ಡು ಅವರದ್ದೇ ಆಗಿರುತ್ತದೆ. ಪಕ್ಷ ಮತ್ತು ಸರ್ಕಾರದ ಚುಕ್ಕಾಣಿಯನ್ನು ಸೂಕ್ತ ಸಮಯದಲ್ಲಿ ಲೋಕೇಶ್ ಅವರಿಗೆ ನೀಡುವುದಾಗಿ ನಾಯ್ಡು ಅವರೇ ಈ ಹಿಂದೆ ಹೇಳಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.