ಬೆಳಗಾವಿ : ತಮ್ಮ ಮೇಲೆ ಆ್ಯಸಿಡ್ ದಾಳಿ ಮಾಡಲು ಪ್ರಯತ್ನಿಸಿದವರನ್ನು ತಕ್ಷಣ ಬಂಧಿಸುವಂತೆ ಕಾಂಗ್ರೆಸ್ ಪಕ್ಷದ ಧುರೀಣ ಲಕ್ಕಣ್ಣ ಸಂಸುದ್ದಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ. ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀಮಂತ ಪೂಜೇರಿ ಮತ್ತು ಶ್ರೀಕಾಂತ ಪೂಜೇರಿ ಹಾಗೂ ಇತರ 30 ಜನರನ್ನು ಬಂಧಿಸುವ ಕುರಿತು ಅವರು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.
ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಆಸಿಡ್ ಎರಚುವ ಪ್ರಯತ್ನ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಿಸಿಟಿವಿ ಫೋಟೋ ಸಹ ಒದಗಿಸಲಾಗಿದೆ. ಆದರೆ, ಆರೋಪಿಗಳನ್ನು ಇದುವರೆಗೂ ಬಂಧಿಸದೇ ಇರುವುದು ತೀವ್ರ ಖಂಡನೀಯ. ಶ್ರೀಮಂತ ಪೂಜೇರಿ ಅವರು ಹಲವು ವರ್ಷಗಳಿಂದ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹಾಗೂ ಶ್ರೀಮಂತ ಮಹಾರಾಜ ಸ್ವಾಮಿ ವೇಷ ಹಾಕಿಕೊಂಡು ತಿರುಗುತ್ತಿದ್ದು ಅನೇಕ ಜನರಿಗೆ ಮೋಸ ಮಾಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಇವರು ಮಳಲಿ ಶಿಕ್ಷಕರು ಮುಧೋಳ ಇವರಿಗೆ ನಲವತ್ತು ಲಕ್ಷದಷ್ಟು ದುಡ್ಡನ್ನು ಪಡೆದು ಮೋಸ ಮಾಡಿ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದು ಈಗಾಗಲೇ ಈ ಬಗ್ಗೆ ಬಾಗಲಕೋಟೆ ಎಸ್ಪಿ ಮತ್ತು ಡಿವೈಎಸ್ಪಿ ಜಮಖಂಡಿ ಅವರಿಗೆ ದೂರು ನೀಡಿದ್ದು, ಇವರಿಗೆ ಸಹಾಯ ಮಾಡಿದ್ದೇನೆ ಎಂದು ತಿಳಿದುಕೊಂಡು ಮಹಾಲಿಂಗಪುರ ಪಟ್ಟಣದ 30 ಜನ ರೌಡಿಗಳನ್ನು ಕರೆದುಕೊಂಡು ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ. ಆದ ಕಾರಣ ತಕ್ಷಣ ಅವರನ್ನು ಬಂಧಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಎಸ್.ಪಿ ಕಚೇರಿ ಮುಂದೆ ಪ್ರತಿಭಟಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.