ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಲ್ಲಿಸಿದ ಹಾಲಿನ ದರ ಏರಿಕೆಯನ್ನು ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಎಂಎಫ್ನ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರ ಮತ್ತು ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಹಾಲಿನ ದರ ಏರಿಕೆಯ ಪ್ರಸ್ತಾವದ ಕುರಿತು ಚರ್ಚೆ ನಡೆಸಿದರು.
ಬಳಿಕ ಪತ್ರಿಕಾ ಹೇಳಿಕೆಯಲ್ಲಿ ಮುಖ್ಯಮಂತ್ರಿ ಈ ವಿಷಯ ತಿಳಿಸಿದ್ದಾರೆ.
‘ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ, ಲಾಭ ಮಾಡುವುದಕ್ಕಲ್ಲ. ಒಂದು ವೇಳೆ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಿದರೂ, ಆ ಲಾಭವನ್ನು ಸಂಪೂರ್ಣವಾಗಿ ರೈತರಿಗೇ ವರ್ಗಾಯಿಸಬೇಕು’ ಎಂದು ತಾಕೀತು ಮಾಡಿದರು.
‘ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಹಾಲಿನ ದರ ಹೆಚ್ಚಳ ಮಾಡಿದಾಗ ಸ್ವಲ್ಪ ಮೊತ್ತವನ್ನು ಒಕ್ಕೂಟಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು’ ಎಂಬ ಒಕ್ಕೂಟಗಳ ಮನವಿಯನ್ನು ಒಪ್ಪದ ಅವರು, ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎನ್ನುವುದು ಸರ್ಕಾರದ ನಿಲುವು’ ಎಂದರು.
ಹಾಲು ಒಕ್ಕೂಟಗಳು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುತ್ತಿವೆ. ಬಳ್ಳಾರಿ ಹಾಲಿನ ಒಕ್ಕೂಟ ₹1.43 ಕೋಟಿಯಷ್ಟು ನಷ್ಟದಲ್ಲಿದೆ. ಫೆಬ್ರುವರಿ ಅಂತ್ಯಕ್ಕೆ ಒಟ್ಟು ಮೂರು ಒಕ್ಕೂಟಗಳು ನಷ್ಟದಲ್ಲಿವೆ. ಮುಂದಿನ ಮೂರು ತಿಂಗಳ ಒಳಗೆ ಆಡಳಿತಾತ್ಮಕ ವೆಚ್ಚವನ್ನು ಶೇ 2.5ಕ್ಕೆ ಇಳಿಸಬೇಕು. ಆರು ತಿಂಗಳ ಒಳಗೆ ಶೇ 2ಕ್ಕಿಂತ ಕೆಳಗೆ
ಇಳಿಸಬೇಕು ಎಂದು ಸೂಚಿಸಿದರು.
ಪ್ರತಿ ಲೀಟರ್ಗೆ ₹3 ಹೆಚ್ಚಳಕ್ಕೆ ಪ್ರಸ್ತಾವ
ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರದಲ್ಲಿ ₹3ರಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಕೆಎಂಎಫ್ ಪ್ರಸ್ತಾವ ಸಲ್ಲಿಸಿದೆ. ರೈತ ಸಂಘಟನೆಗಳ ಬೇಡಿಕೆಯಂತೆ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಹೆಚ್ಚಿಸುವುದಕ್ಕಾಗಿ ಈ ಬೇಡಿಕೆ ಮಂಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.