ಬೆಳಗಾವಿ :
ಸಚಿವರಾದ ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ದಿನೇಶ ಗುಂಡೂರಾವ್, ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, 10 ಸಾಹಿತಿಗಳು, ಚಲನಚಿತ್ರ ನಟರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ಅಕ್ಟೋಬರ್ 8 ರಂದು ಶ್ರೀ ನಿಜಗುಣಾನಂದ ಸ್ವಾಮೀಜಿಗಳ ಕೊಲೆ ಮಾಡುವುದಾಗಿ ಅನಾಮಿಕ ಪತ್ರ ಬಂದಿತ್ತು. ಈ ಬಗ್ಗೆ ಶ್ರೀಗಳು ಕಿತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆಪ್ಟೆಂಬರ್ 20 ರಂದು ಮತ್ತೊಮ್ಮೆ ಬೆದರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ಶ್ರೀಗಳು, ಮೂವರು ಸಚಿವರು, 10 ಸಾಹಿತಿಗಳು, ಇಬ್ಬರು ಚಲನಚಿತ್ರ ನಟರ ಹೆಸರನ್ನು ಬರೆಯಲಾಗಿದೆ.
ಮಾಜಿ ಸಚಿವೆ ಹಾಗೂ ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ,
ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಕೆ. ಮರುಳಸಿದ್ದಪ್ಪ, ಭಾಸ್ಕರ ಪ್ರಸಾದ್, ಪ್ರೊ.ಭಗವಾನ್, ಪ್ರೊ. ಮಹೇಶ ಚಂದ್ರಗುರು, ಬಿ.ಎಲ್. ವೇಣು, ದ್ವಾರಕನಾಥ್, ನಟರಾದ ಚೇತನ್ ಮತ್ತು ಪ್ರಕಾಶ್ ರಾಜ್ ಹೆಸರು ಪತ್ರದಲ್ಲಿದೆ.
ಕೆಲವು ಪ್ರಶ್ನೆಗಳನ್ನು ಮಾಡಿರುವ ವ್ಯಕ್ತಿ ಇವುಗಳಿಗೆ ಉತ್ತರ ಕೊಡಿ ಎಂದು ಬರೆದಿದ್ದಾನೆ. ಮುಸ್ಲಿಮರು, ಪಾಕಿಸ್ತಾನಿಗಳು ಭಯೋತ್ಪಾದಕರು ಮಾಡಿರುವುದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದೆಯೇ ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ ? ಧೈರ್ಯವಿದ್ದರೆ ಹೇಳಿ. ಇಲ್ಲವಾದರೆ ನಿಮ್ಮ ಕೊನೆಯ ದಿನಗಳನ್ನು ಎಣಿಸಿ ಎಂದು ಅನಾಮಿಕ ಬರೆದಿದ್ದಾನೆ.
ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮಪತ್ರ ಅಂತಾದರೂ ತಿಳಿ ಅಥವಾ ಸಾವಿನ ಪತ್ರ ಅಂತಾದರೂ ತಿಳಿ. ನಾನು ನಿನ್ನ ಜೊತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಸಾವು ಬರುತ್ತದೆ ಎಂದು ಬರೆಯಲಾಗಿದೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ, ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದೀಯ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ. ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯಾ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.