ಚೆನ್ನೈ: ಸದ್ಯದಲ್ಲೇ ಎಂ.ಕೆ.ಸ್ಟಾಲಿನ್ ಸಂಪುಟದಲ್ಲಿ ಬದಲಾವಣೆ ನಡೆಯಲಿದ್ದು, ಸಿಎಂ ಪುತ್ರ, ಸಚಿವ ಉದಯ ನಿಧಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ತಮಿಳುನಾಡು ರಾಜ ಕೀಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಉದಯನಿಧಿ ಅವರನ್ನು ಅವರ ತಂದೆ ಉಪ ಮುಖ್ಯಮಂತ್ರಿ ಮಾಡುವುದರಲ್ಲಿ ಯಾವ ಅನುಮಾನ ಇಲ್ಲ. ಆದರೆ, ಅದು ಯಾವಾಗ ನಡೆಯುತ್ತದೆ ಎಂಬುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ. ಸ್ಟಾಲಿನ್ ಅವರು ಅಮೆರಿಕ ಭೇಟಿಗೆ ಮುನ್ನವೇ ನಡೆಯಲಿದೆಯೇ ಅಥವಾ ಅಮೆರಿಕದಿಂದ ಮರಳಿದ ಬಳಿಕ ನಡೆಯಲಿದೆಯೇ ಎಂಬುದು ಖಚಿತವಾಗಿಲ್ಲ. ಸ್ಟಾಲಿನ್ ಆಗಸ್ಟ್ 22ರಂದು ಅಮೆರಿಕಕ್ಕೆ ತೆರಳಲಿದ್ದಾರೆ.
ಸದ್ಯ ಯುವಜನ ಹಾಗೂ ಕ್ರೀಡಾ ಅಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತಿರುವ ಸ್ಟಾಲಿನ್ ಪುತ್ರ ಉದಯ ನಿಧಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸುದ್ದಿ ಹರಡಿದ್ದು, ಈ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ವಿರೋಧ ಕೇಳಿ ಬಂದಿಲ್ಲ ಎನ್ನಲಾಗಿದೆ. ಶಾಸಕನಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟ 19 ತಿಂಗಳಲ್ಲೇ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿತ್ತು. ಈಗ ಡಿಸಿಎಂ ಹುದ್ದೆಗೂ ಸಮ್ಮತಿ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಸ್ಟಾಲಿನ್ ಇದ್ದಾರೆ. ವಿ. ಸೆಂಥಿಲ್ ಬಾಲಾಜಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇನ್ನೊಬ್ಬರ ಸೇರ್ಪಡೆ ನಡೆಯಲಿದೆ. ಸಂಪುಟದಲ್ಲಿನ ಬದಲಾವಣೆ ಪ್ರವಾಸಕ್ಕೆ ಮುನ್ನ ಅಥವಾ ಪ್ರವಾಸದಿಂದ ಬಂದ ಬಳಿಕ ನಡೆಯಲಿದೆಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.