ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಕೈಬಿಡಬೇಕು. ಇಲ್ಲದೆ ಹೋದರೆ ನಾವು ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಒತ್ತಾಯಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಮತ್ತೊಮ್ಮೆ ಪ್ರತಿಪಾದನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಥಣಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಬಾಡಿಗೆ ಹೋರಾಟಗಾರರನ್ನು ಒಟ್ಟುಗೂಡಿಸುವ ಮೂಲಕ ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುತ್ತದೆ ಎಂದು ಟೀಕಿಸಿದರು.
ಬೆಳಗಾವಿಯ ಎಂಇಎಸ್ ಇನ್ನಾದರೂ ಬೆಳಗಾವಿಯನ್ನು ಕೇಳುವುದನ್ನು ಬಿಡಬೇಕು. ಇಲ್ಲವಾದರೆ ನಾವು ಮುಂಬೈ ಮೇಲೆ ಹಕ್ಕು ಸಾಧಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ತಿನ್ನುವುದು ಕರ್ನಾಟಕದ ಅನ್ನ. ಇಲ್ಲಿದ್ದೆ ಬೆಳಗಾವಿಯನ್ನು ಕೇಳುತ್ತಿದ್ದೀರಿ. ಇನ್ನೊಮ್ಮೆ ನಿಮ್ಮ ಮೊಂಡು ಹಟ ಮುಂದುವರಿಸಿದರೆ ಇನ್ನು ನಾವು ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಸಂದರ್ಭ ಬರಬಹುದು. ಕರ್ನಾಟಕದಲ್ಲಿ ಇರುವ ಎಂಇಎಸ್ ನಾಯಕರು ಇಲ್ಲಿಯ ಸೌಲಭ್ಯಗಳನ್ನು ಬಳಸಿಕೊಂಡು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳುತ್ತಿದ್ದೀರಿ. ಈ ಬಾಡಿಗೆ ಹೋರಾಟಗಾರರು ಬಾಲ ಮುಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕದ ಉಪ ಮುಖ್ಯಮಂತ್ರಿ ಅಗಿದ್ದಾಗ ಲಕ್ಷ್ಮಣ ಸವದಿ ಅವರು, ನಾವು ಮೊದಲಿನಿಂದಲೂ ಮುಂಬೈ ಕರ್ನಾಟಕದಲ್ಲಿದ್ದವರು. ಹೀಗಾಗಿ ಮುಂಬೈ ಮೇಲೆ ನಮಗೆ ಹಕ್ಕು ಮತ್ತು ಪಾಲಿದೆ. ಮುಂಬೈ ನಗರವನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಈಗಿನಿಂದಲೇ ಬೇಡಿಕೆ ಇಡುತ್ತೇವೆ. ಅಲ್ಲಿಯವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದಿದ್ದರು.
ತೀವ್ರ ಆಕ್ಷೇಪ : ಲಕ್ಷ್ಮಣ ಸವದಿ ಅವರ ಹೇಳಿಕೆಗೆ ಎಂಇಎಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮರಾಠಿಗರು ಪ್ರಜಾಪ್ರಭುತ್ವ ವಿಧಾನಗಳ ಮೂಲಕ ಗಡಿ ಹೋರಾಟ ಜೀವಂತವಾಗಿಟ್ಟುಕೊಂಡಿದ್ದಾರೆ. ನಾವು ಬಾಡಿಗೆ ಹೋರಾಟಗಾರರು ಅಲ್ಲ. ನಾವು ಯಾವ ಫಲಾಪೇಕ್ಷೆಯಿಲ್ಲದೇ ಮರಾಠಿಗರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆ ಬಗ್ಗೆ ಅಜ್ಞಾನ ಪ್ರದರ್ಶಿಸಿರುವ ಲಕ್ಷ್ಮಣ ಸವದಿ ಅವರು ಅಸಂಬದ್ಧ ಮಾತುಗಳ ಮೂಲಕ ಪ್ರಚಾರ ಪಡೆಯಲು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಎಂಇಎಸ್ ನಾಯಕರು ಆರೋಪಿಸಿದ್ದಾರೆ.


