ಬೆಂಗಳೂರು :
“ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗೆ “ಕಾಂಗ್ರೆಸ್ ಕುಟುಂಬ” ಕಾರ್ಯಕ್ರಮ ರೂಪಿಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ಜೂನ್ 1ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದು, “ಕಾಂಗ್ರೆಸ್ ಕುಟುಂಬ” ಎಂಬ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಪ್ರತಿ ಬೂತ್ ನಲ್ಲಿ 50 ಸದಸ್ಯರನ್ನು ಸೇರಿಸಬೇಕು. ಆ ಬೂತ್ ಹಾಗೂ ಹಳ್ಳಿಗಳಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಆ 50 ಮಂದಿಯನ್ನು ಸೇರಿಸಿ ತೀರ್ಮಾನ ಮಾಡಬೇಕು. ಆಮೂಲಕ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು. ಯಾರು ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರು ಈ ಜವಾಬ್ದಾರಿ ತೆಗೆದುಕೊಂಡು ಈ ಕಾಂಗ್ರೆಸ್ ಕುಟುಂಬವನ್ನು ಬೆಳೆಸಲೇಬೇಕು. ಇದಕ್ಕೆ ನೀವು ಸಜ್ಜಾಗಬೇಕು.
*ತಿಂಗಳಿಗೊಮ್ಮೆ ಸಿಎಂ ಅವರಿಂದ ಕಾರ್ಯಕರ್ತರ ಭೇಟಿ:*
ನಾನು ಹಾಗೂ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದು, ಪ್ರತಿ ತಿಂಗಳು ಒಂದು ದಿನ ಕಾಂಗ್ರೆಸ್ ಕಚೇರಿಯಲ್ಲಿ ಕೂತು ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಮಾಡಲಿದ್ದೇವೆ. ಇದನ್ನು ಸರಿಯಾದ ವ್ಯವಸ್ಥೆ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು.
ಎಷ್ಟೋ ಬಾರಿ ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಪ್ರಮುಖರನ್ನೇ ಮೊದಲು ಕರೆದು ಮಾತನಾಡಿಸುತ್ತೇವೆ. ಇದರಿಂದ ನಮಗೂ ಮುಜುಗರವಾಗುತ್ತದೆ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಿದವರ ಜತೆ ನಮಗೆ ಮಾತನಾಡಲು ಆಗುವುದಿಲ್ಲ. ಈ ಅನುಭವ ನನಗೂ ಆಗಿದೆ. ಹೀಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.
ಈ ಸರ್ಕಾರ ನಾಲ್ಕು ವರ್ಷದ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ ಇದಕ್ಕಾಗಿ ನಾವು ಈಗೀನಿಂದಲೂ ತಯಾರಿ ನಡೆಸಬೇಕು. ನಾನು ಈಗಾಗಲೇ ನಮ್ಮ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಕೃಷ್ಣ ಭೈರೇಗೌಡ ಅವರ ಜತೆ ಚರ್ಚೆ ಮಾಡಿದ್ದೇನೆ. ನಾವು ನಮ್ಮ ದೇವಾಲಯವಾಗಿರುವ ಕಾಂಗ್ರೆಸ್ ಕಚೇರಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಮುಂದಿನ ಒಂದು ವರ್ಷದಲ್ಲಿ ಅಡಿಪಾಯ ಹಾಕುತ್ತೇವೆ. ಇನ್ನು ರೇಸ್ ಕೋರ್ಸ್ ರಸ್ತೆಯ ಕಚೇರಿಯ ಕಟ್ಟಡ ಹೊಡೆದು ಹಾಕಿ ಹೊಸದಾಗಿ ನಿರ್ಮಾಣ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಇದರ ಹೊಣೆ ಹೊರಬೇಕು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಕೆಲಸ ಆರಂಭವಾಗಿವೆ.
ಎಲ್ಲರೂ ಒಟ್ಟಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ ಎದುರಿಸಬೇಕು. ನಮ್ಮ ಪಕ್ಷ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆಮೂಲಕ ಮೇಲ್ಮನೆಯಲ್ಲಿ ನಮಗೆ ಬಹುಮತ ಸಿಗಬೇಕು. ಆಗ ಮಾತ್ರ ಬಿಲ್ ಗಳು ಪಾಸಾಗುತ್ತವೆ.”
*ನೆಹರೂ ಅವರು ಕಾಂಗ್ರೆಸ್ ಪಕ್ಷದ ಶಕ್ತಿ:*
ನೆಹರೂ ಅವರ ಹೇಸರೇ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರಿಗೆ ಒಂದು ಸ್ಫೂರ್ತಿ. ಈ ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದು ಇದಕ್ಕೆ ಭದ್ರ ಅಡಿಪಾಯ ಹಾಕಿದ್ದು ನೆಹರೂ ಅವರು. ಈ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಬಿಜೆಪಿ ನಾಯಕರು ಇತಿಹಾಸ ತಿರುಚಲು, ಅವರ ಹೆಸರನ್ನು ಇತಿಹಾಸ ಪುಟಗಳಿಂದ ತೆಗೆಯಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಅವರು ಇನ್ನು 2-3 ಜನ್ಮ ಎತ್ತಿ ಬಂದರೂ ನೆಹರೂ ಅವರ ಸಾಧನೆ ತೆಗೆದುಹಾಕಲು ಸಾಧ್ಯವಿಲ್ಲ.
ಸ್ಥಳೀಯ ಸಂಸ್ಥೆಗಳ ವಿಚಾರವಾಗಿ ಇತ್ತೀಚೆಗೆ ನಾನು ಮಾತನಾಡಿದ್ದೆ. ನೆಹರೂ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದರೂ ಅಲಹಬಾದ್ ಮುನ್ಸಿಪಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಸ್ವಾತಂತ್ರ್ಯ ಹೋರಾಟ ಮಾಡಿಕೊಂಡು ಜೈಲು ವಾಸ ಅನುಭವಿಸಿ ನಂತರ ಪ್ರಧಾನಮಂತ್ರಿಯಾದರು. ಪ್ರತಿ ರಾಜ್ಯದಲ್ಲೂ ಅವರದೇ ಆದ ಸಾಕ್ಷಿ ಗುಡ್ಡೆಗಳನ್ನು ಬಿಟ್ಟಿದ್ದಾರೆ.
ನೆಹರೂ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಮಾರುತ್ತಾ ಬಂದಿದೆ. ಬೆಂಗಳೂರಿನಲ್ಲಿ ಎಚ್ಎಂಟಿ, ಹೆಚ್ಎಎಲ್, ಐಐಟಿ, ಬಿಹೆಚ್ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾರೆ. ಅಂದಿನ ಕಾಲದಲ್ಲಿ ಉದ್ಯೋಗ ಸೃಷ್ಟಿಸಿ ಬಡತನ ನಿವಾರಣೆಗೆ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬಲು ಈ ಸಾರ್ವಜನಿಕ ಉದ್ದಿಮೆ ಆರಂಭಿಸಿದರು. ಅವರು ಮಾಡಿದ ಆಸ್ತಿಗಳನ್ನು ಮಾರಿಕೊಳ್ಳಲಾಗುತ್ತಿದೆ.
ದೇಶವನ್ನು ಯಾವ ಧಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ನೆಹರೂ ಅವರು ಸರಿಯಾಗಿ ಚಿಂತಿಸಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವ ತಂದು. ಸಂವಿಧಾನ ಸಮಿತಿಗೆ ಅಂಬೇಡ್ಕರ್ ಅವರನ್ನು ನೇಮಿಸಿ, ದೇಶಕ್ಕೆ ಸಂವಿಧಾನ ಕೊಟ್ಟು, ತ್ರಿವರ್ಣ ಧ್ವಜ ಕೊಟ್ಟಿದ್ದಾರೆ. ಮಹಿಳೆಯರ ಬಗ್ಗೆ ಅವರಿಗೆ ವಿಶೇಷ ಗೌರವ ಇದೆ. ಮಹಿಳೆಯರು ಸಂತೋಷವಾಗಿದ್ದರೆ ದೇಶ ಸಂತೋಷವಾಗಿರುತ್ತದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಕೂಡ ಅವರ ಮಾತಿನಂತೆ ಮಹಿಳೆಯರಿಗೆ ಶಕ್ತಿ ತುಂಬಬೇಕು ಎಂದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆ ಮೂಲಕ ಹಣ್ಣಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ.
ದೇಶದಲ್ಲಿ ನಾವು ಮಕ್ಕಳ ಮೇಲೆ ನಂಬಿಕೆ ಇಡಬೇಕು. ಮಕ್ಕಳಲ್ಲಿ ಯಾವುದೇ ರೀತಿಯ ದ್ವೇಷ ಮನೋಭಾವ ಇರುವುದಿಲ್ಲ. ಹಾಲಿನಂತಾ ಮನಸ್ಸು. ಅವರು ಒಗ್ಗಟ್ಟಾಗಿ ಇರುತ್ತಾರೆ. ಈ ದೇಶ ಒಗ್ಗಟ್ಟಾಗಿ ಶಾಂತಿಯಿಂದ ಇರಬೇಕು ಎಂದು ಬಯಸಿದ್ದರು. ಹೀಗಾಗಿ ನೆಹರೂ ಅವರ ಹುಟ್ಟಿದ ದಿನವನ್ನು ಮಕ್ಕಳ ದಿನವಾಗಿ ನಾವು ಆಚರಣೆ ಮಾಡುತ್ತೇವೆ.
ಈ ದೇಶದಲ್ಲಿ ಅವರ ಕೈಗಾರಿಕಾ ನೀತಿ, ವಿದೇಶಾಂಗ ನೀತಿ, ಅಭಿವೃದ್ಧಿ ನೀತಿಯಿಂದ ಅವರನ್ನು ಇಡೀ ವಿಶ್ವ ಬಹಳ ಗೌರವದಿಂದ ಕಾಣುತ್ತಿತ್ತು.
ನೀವೆಲ್ಲರೂ ಕಷ್ಟಪಟ್ಟು ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರಿ. ಕಾರ್ಯಕರ್ತರು, ಮತದಾರರ ಶ್ರಮದಿಂದ ಸರ್ಕಾರ ಬಂದಿದೆ. ಅದೇ ಶ್ರಮದಿಂದಾಗಿ ಕರ್ನಾಟಕದಲ್ಲೇ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ಈ ಬಾರಿ ಸದ್ಯ ಚರ್ಚೆಯಾಗುತ್ತಿರುವಂತೆ ಚುನಾವಣೆಯಲ್ಲಿ ಇವಿಎಂ ಹೆಚ್ಚುಕಮ್ಮಿಯಾಗದಿದ್ದರೆ ಜನ ನಮಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ ಎಂಬ ನಂಬಿಕೆ ಇದೆ.
ನೆಹರೂ ಅವರು ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದಾರೆ. ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ನಲ್ಲಿ ಯಾರೆಲ್ಲಾ 2 ಅವಧಿ ಹಾಗೂ 10 ವರ್ಷಗಳ ಅಧಿಕಾರ ಮಾಡಿದ್ದಾರೋ ಅವರು ಅಧಿಕಾರ ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಸಂಸತ್ ಚುನಾವಣೆ ವೇಳೆ ಯುವಕರಿಗೆ ಹೆಚ್ಚು ಟಿಕೆಟ್ ನೀಡಿದ್ದೇವೆ. ಬಿಜೆಪಿಯವರು 15 ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಅವರಲ್ಲಿ ಆದ ಅಸಮಾಧಾನ, ಗೊಂದಲ ನಮ್ಮಲ್ಲಿ ಆಗಿಲ್ಲ. ಈ ಯುವಕರು ಹತ್ತಾರು ವರ್ಷ ರಾಜಕಾರಣ ಮಾಡಲು ಶಕ್ತರಾಗಿದ್ದಾರೆ.