ಬೆಂಗಳೂರು:
“3,000 ಸಾವಿರ ಕ್ಯೂಸೆಕ್ಸ್ ನೀರಿನಲ್ಲಿ ಕೆಆರ್ಎಸ್ ನಿಂದ ಒಂದು ಹನಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “2,000 ಕ್ಯೂಸೆಕ್ಸ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತಿರುತ್ತದೆ. 1,000 ಕ್ಯೂಸೆಕ್ಸ್ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ರಾಜಿಯಾಗುವುದಿಲ್ಲ. ಮಂಡ್ಯ ಭಾಗದ ರೈತರ ಹಿತ ಮುಖ್ಯ” ಎಂದರು.
*ಮೇಕೆದಾಟು ವಿಚಾರ; ದೆಹಲಿಯಲ್ಲಿ ಹೋರಾಟ ಮಾಡಿ*
“ಮೇಕೆದಾಟು ಯೋಜನೆ ಬೇಕು ಎಂದು ವಿರೋಧ ಪಕ್ಷದವರು ಅಧಿಕಾರಿಗಳಿಗೆ ಅರ್ಜಿ ಕೊಟ್ಟಿದ್ದಾರೆ. ಇಲ್ಲಿ ಕೊಟ್ಟರೆ ಏನು ಪ್ರಯೋಜನ, ಮಾಜಿ ಪ್ರಧಾನಿ ದೇವೆಗೌಡರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನೀವು ದೆಹಲಿಯಲ್ಲಿ ಹೋರಾಟ ಮಾಡಿ, ಇಲ್ಲಿ ಮಾಡಿದರೆ ಏನು ಪ್ರಯೋಜನ?” ಎಂದರು
“ಸುಪ್ರೀಂಕೋರ್ಟ್ ಕೂಡ ಮೌಖಿಕವಾಗಿ ಮೇಕೆದಾಟು ಯೋಜನೆಗೆ ಪೂರಕವಾಗಿ ಮಾತನಾಡಿದೆ. 26 ಜನ ಸಂಸದರು ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಪರವಾಗಿ ಮಾತನಾಡಿದರು. ಅದರಂತೆ ಈಗ ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿ” ಎಂದು ಆಗ್ರಹಿಸಿದರು.
ತಮಿಳುನಾಡಿನ ಜೊತೆ ಡಿ.ಕೆ.ಶಿವಕುಮಾರ್ ಅವರು ಮಾತುಕತೆ ನಡೆಸುತ್ತಿಲ್ಲ ಎಂದು ಕುಮಾರಸ್ವಾಮಿ ಅವರ ಆರೋಪಕ್ಕೆ “ರಾಜ್ಯದ ಹಿತಕ್ಕೆ ಎರಡು ಪಕ್ಷಗಳು ಒಂದಾಗಿದ್ದಾರೆ, ಈಗಲೂ ರಾಜ್ಯದ ಹಿತಕ್ಕೆ ಮೇಕೆದಾಟು ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ತರಲಿ, ಮೂರು ವರ್ಷದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಮುಗಿಸುತ್ತೇನೆ ಎಂದರು.
12,500 ಕ್ಯೂಸೆಕ್ಸ್ ನೀರಿಗೆ ತಮಿಳುನಾಡು ಬೇಡಿಕೆ ಇಟ್ಟಿತ್ತು, ನಿಮ್ಮ ಹೋರಾಟದಿಂದ ಸಮಿತಿ 3,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಶಿಫಾರಸ್ಸು ಮಾಡಿದೆ. ಮತ್ತೊಮ್ಮೆ ಹೋರಾಟ ಏತಕ್ಕೆ ಎಂದರು.
ಹೋರಾಟಗಾರರ ಬಗ್ಗೆ ನಮಗೆ ತಕರಾರು ಇಲ್ಲ, ಅವರ ಜೊತೆ ನಾವಿರುತ್ತೇವೆ. ಸೆ.29 ರಂದು ಮತ್ತೊಮ್ಮೆ ಬಂದ್ ಎಂದು ಹೇಳಲಾಗುತ್ತಿದೆ, ಇದರಿಂದ ಸಾವಿರಾರು ಕೋಟಿ ವಹಿವಾಟು ಹಾಳಾಗುತ್ತದೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ ಬಂದ್ ಬೇಡ ಎಂದು ಮನವಿ ಮಾಡಿದರು.