ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮ ಜೀವನದ ಮೊದಲ ಬೈಕ್ ಜತೆಗೆ ವಿಶೇಷ ಬಾಂಧವ್ಯ, ಭಾವನಾತ್ಮಕ ಸಂಬಂಧ ಇರುತ್ತದೆ. ಬಹು ವರ್ಷಗಳ ನಂತರ ಮತ್ತೆ ತಮ್ಮ ಬೈಕ್ ಅನ್ನು ಕಂಡರೆ ನೂರೆಂಟು ನೆನಪುಗಳು ಗರಿ ಬಿಚ್ಚಿಕೊಳ್ಳುತ್ತವೆ. ಕಣ್ಮುಂದೆ ಹಾದು ಹೋಗುತ್ತವೆ. ಅಂತಹ ಘಳಿಗೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಸಾಕ್ಷಿಯಾದರು.
ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಡಿಸಿಎಂ ಅವರ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ಡಿ (Yezde) ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿ ಸದಾಶಿವನಗರದ ನಿವಾಸಕ್ಕೆ ತಂದು ನಿಲ್ಲಿಸಿದಾಗ ಅದನ್ನು ಕಂಡ ಶಿವಕುಮಾರ್ ಅವರು ಪುಳಕಿತರಾದರು.
ತಾವೇ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಖುಷಿಪಟ್ಟರು. “ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ” ಎಂದು ಆನಂದ ತುಂದಿಲರಾದರು.
ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ ಡಿಸಿಎಂ 15 ದಿನಗಳ ಗಡುವು
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಸ್ತೆಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು ಈಗಾಗಲೇ “ರಸ್ತೆ ಗುಂಡಿ ಗಮನ” ಎನ್ನುವ ಆಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಹಾಕಲಿದ್ದು, ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಕೆಲಸ ಮುಗಿಸಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಲ ಸೌಲಭ್ಯ, ಸಹಾಯಧನ, ಕೊಳವೆ ಬಾವಿ, ಕಾಲೇಜು ಶುಲ್ಕಕ್ಕೆ ನೆರವು; ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ಕನಕಪುರ:
ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ, ಸಹಾಯ ಧನ, ನಿವೇಶನ, ಮನೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ, ಸರ್ಕಾರಿ ಶಾಲೆ ಶಿಕ್ಷಕರ ನೇಮಕ, ಕಾಲೇಜು ಶುಲ್ಕ ಪಾವತಿಗೆ ಸಹಾಯ ಸೇರಿದಂತೆ ಅರ್ಜಿ ಹೊತ್ತು ತಂದ ನೂರಾರು ಜನರ ಸಮಸ್ಯೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರಿಹಾರ ನೀಡುವ ಭರವಸೆ ಕೊಟ್ಟರು.
ಕನಕಪುರದ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಉಯ್ಯಂಬಳ್ಳಿ ಪಂಚಾಯ್ತಿ ಸದಸ್ಯರಾದ ರಮೇಶ್ ನಾಯಕ್ ಎಂಬುವವರು ತಮ್ಮ ಗ್ರಾಮಸ್ಥರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥ ಮಲ್ಲೇಶ್ ಎಂಬುವವರು ತೋಟಗಾರಿಕೆ ಇಲಾಖೆಯ ಫಾರಂ ಗೇಟ್ ಯೋಜನೆಯಲ್ಲಿ ಕೊಟ್ಟಿಗೆ ಕಟ್ಟಲು ಸಹಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಇನ್ನು ಲತಾ ಬಾಯಿ ಎಂಬುವವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಸಿದ್ದ ನಾಯಕ್ ಎಂಬುವವರು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಈ ಎಲ್ಲಾ ಮನವಿಗಳನ್ನು ಪರಿಶೀಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಅರ್ಜಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಮಾಲಪ್ಪನ ದೊಡ್ಡಿಯ ನಿವಾಸಿ ಮಹದೇವಸ್ವಾಮಿ ಎಂಬುವವರು ಟ್ಯಾಕ್ಸಿ ಖರೀದಿ ಮಾಡಲು ಸರ್ಕಾರದಿಂದ ನೀಡುವ 3 ಲಕ್ಷ ಸಹಾಯಧನ ಕೊಡಿಸಬೇಕು ಎಂಬ ಮನವಿಗೆ ಶಿವಕುಮಾರ್ ಅವರು ಸಹಿ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು.
ಉಯ್ಯಂಬಳ್ಳಿ, ಯಡಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂಬ ಗ್ರಾಮಸ್ಥರ ಮನವಿ ಒಪ್ಪಿದ ಶಿವಕುಮಾರ್ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.
ಮೆಲ್ಲಕೋಟೆ ರೆಹಮಾನಿಯ ನಗರ ಕ್ವಾರೆ ರಸ್ತೆ. ವಾರ್ಡ್ 31, ಮೊಹಮದ್ ಅಸ್ಲಾಂ, ಕೊಳವೆ ಬಾವಿ ಇದ್ದರೂ ನೀರಿಲ್ಲ. ಸ್ಲಂ ಬೋರ್ಡ್ 20 ಮನೆಗಳಿದ್ದರೂ ನೀರಿಲ್ಲ ಎಂದು ಮನವಿ ಮಾಡಿದರು. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಡಿಸಿಎಂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಕಪುರ ಟೌನ್ ಮುತ್ತತ್ತಿ ವಠಾರ ನಿವಾಸಿ ಜಯಲಕ್ಷ್ಮಿ ಎಂಬುವವರು ತಮಗೆ ನಿವೇಶನ ಆಗಿದ್ದು, ಮನೆ ಕಟ್ಟಿಕೊಡಲು ಹಣವನ್ನೂ ಪಾವತಿಸಿದ್ದು, ಕಲ್ಲು ಸಿಕ್ಕಿದೆ ಎಂಬ ಕಾರಣಕ್ಕೆ ಇನ್ನು ಮನೆ ಆಗಿಲ್ಲ ಎಂದರು. ಇವರ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಿವಕುಮಾರ್ ಅವರು ಸೂಚನೆ ನೀಡಿದರು.
ಚನ್ನಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಹಂಶಿಕಾ, ಹಂಶಿಣಿ ಅವರು ಕಾಲೇಜು ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮನೆಗೆ ಕಳುಹಿಸಿದ್ದು, ಅವರಿಗೆ ಶುಲ್ಕ ಪಾವತಿಗೆ ನೆರವು ನೀಡಬೇಕು ಎಂದು ಶಶಾಂಕ್ ಎಂಬುವವರು ಮನವಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕರಿಸಿದ ಶಿವಕುಮಾರ್ ಅವರು ಕಾಲೇಜಿನ ಜತೆ ಚರ್ಚೆ ಮಾಡಿ ನೆರವು ನೀಡುವುದಾಗಿ ಭರವಸೆ ನೀಡಿದರು.
ಕೂತಗೊಂಡನ ಹಳ್ಳಿ, ಸರ್ಕಾರಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ ಎಂದು ಗ್ರಾಮಸ್ಥರು ಮನವಿ ನೀಡಿದಾಗ, ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
*ಓಡಾಡುವ ರಸ್ತೆಗಾಗಿ ಎರಡು ಬಣಗಳ ನಡುವೆ ತಿಕ್ಕಾಟ*
ನಲ್ಲಹಳ್ಳಿ ಗ್ರಾಮದಲ್ಲಿ ನಾಲ್ಕೈದು ಕುಟುಂಬ ಓಡಾಡುವ ರಸ್ತೆಯಲ್ಲಿ ಕಾಂಪೌಂಡ್ ಹಾಕುವ ವಿಚಾರವಾಗಿ ಎರಡು ಬಣಗಳು ಡಿಸಿಎಂ ಎದುರೆ ವಾಗ್ವಾದ ನಡೆಸಿದರು.
ಕಮಲಮ್ಮ ಮತ್ತು ಮನೆಯವರು ಉಳಿದ ನಾಲ್ಕೈದು ಮನೆಯವರು ಓಡಾಡಲು ಇರುವ ಜಾಗದಲ್ಲಿ ಕಾಂಪೌಂಡ್ ಹಾಕಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕಾಂಪೌಂಡ್ ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಒಂದು ಬಣ ವಾದ ಮಾಡಿದರೆ, ಮತ್ತೊಂದು ಬಣ ಇದು ನಮಗೆ ಸೇರಿದ ಜಾಗ ಇದಕ್ಕೆ ಸಂಬಂಧಿಸಿದ ದಾಖಲೆ ನಮ್ಮ ಬಳಿ ಇವೆ. ಅವರ ಬಳಿ ಯಾವುದೇ ದಾಖಲೆ ಇಲ್ಲ. ನೀವೇ ಪರಿಶೀಲಿಸಿ. ನಮಗೆ ಕಾಂಪೌಂಡ್ ಹಾಕಲು ಅವಕಾಶ ಮಾಡಿಕೊಡಿ ಎಂದು ಮತ್ತೊಂದು ಬಣ ವಾದಿಸಿತು.
ಎರಡೂ ಬಣಗಳ ಮಾತನ್ನು ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳು ಹಾಗೂ ಉಪ ಆಯುಕ್ತರನ್ನು ಕರೆದು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ದಾಖಲೆ ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.