ಬೆಂಗಳೂರು:
ಮುಂಬರುವ ಲೋಕಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಚರ್ಚೆ ಮಾಡುವ ಉದ್ದೇಶದಿಂದ ಸಚಿವರು, ಶಾಸಕರು ಹಾಗೂ ಇತರ ನಾಯಕರು ದೆಹಲಿ ಪ್ರವಾಸ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:
“ಲೋಕಸಭೆ ಚುನಾವಣೆ, ಪಕ್ಷದ ಹಿತದೃಷ್ಟಿ, ಚುನಾವಣಾ ತಂತ್ರಗಾರಿಕೆ, ಜವಾಬ್ದಾರಿಗಳ ಹಂಚಿಕೆ ಕುರಿತು ಚರ್ಚೆ ಮಾಡಲು ನಮ್ಮ ನಾಯಕರು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಇದರ ಜೊತೆಗೆ ನಮ್ಮ ಎಲ್ಲಾ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪವ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
ಇಂದಿನಿಂದ ಗೃಹಜ್ಯೋತಿ ಯೋಜನೆ ಜಾರಿ ಕುರಿತು ಕೇಳಿದಾಗ ಪ್ರತಿಕ್ರಿಯೆ ನೀಡಿದ ಅವರು, “ಆಗಸ್ಟ್ 5 ರಿಂದ ಗೃಹ ಜ್ಯೋತಿ ಯೋಜನೆ ಜಾರಿಯಾಗಲಿದೆ, ಇಂದಿನಿಂದ ನನಗೂ ಫ್ರೀ, ನಿನಗೂ ಫ್ರೀ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಚಿವರು, ಶಾಸಕರು ಹೊರತಾಗಿ ಹಲವು ಮುಖಂಡರು ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಹೋಗುತ್ತಿರುವ ಬಗ್ಗೆ ಕೇಳಿದಾಗ, “ಕೇವಲ ಸಚಿವರಿಗೆ ಮಾತ್ರ ಆಹ್ವಾನ ನೀಡಿಲ್ಲ ಹಲವು ಶಾಸಕರು, ಸಂಸದರು ಹಾಗೂ ಪಕ್ಷದ ಹಿರಿಯ ಮುಖಂಡರಿಗೂ ಸೇರಿದಂತೆ ಒಟ್ಟು ಐವತ್ತು ಜನರನ್ನು ಮೂರು ವಿಭಾಗಗಳಂತೆ ಸಭೆಗೆ ಆಹ್ವಾನ ನೀಡಲಾಗಿದೆ” ಎಂದು ಹೇಳಿದರು.