ಬೆಂಗಳೂರು:
“ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ. ದೇಶದ ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರು, ʼದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಬದಲಿಸುವ ಬಗ್ಗೆʼ ಕೇಳಿದಾಗ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು,
“ದೇಶದ ಎಲ್ಲ ಜನರಿಗೂ ಅನ್ನ, ಉದ್ಯೋಗ, ಮನೆ ಸಿಕ್ಕರೆ ಅದನ್ನು ಬದಲಾವಣೆ ಎನ್ನಬಹುದು. ಕಳೆದ 9 ವರ್ಷಗಳಲ್ಲಿ ಜನರ ಆದಾಯ ದುಪಟ್ಟಾಯಿತೇ, 15 ಲಕ್ಷ ಹಣ ಬ್ಯಾಂಕ್ ಖಾತೆಗೆ ಬಂದಿದೆಯೇ? ಇಲ್ಲ. ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರು ಬಿಡುವುದಿಲ್ಲ ಎಂದು ಬಿಜೆಪಿಯವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು, ಆದರೆ ಅವರು ಕೊಟ್ಟ ಮಾತನ್ನು ಒಂದಾದರೂ ಉಳಿಸಿಕೊಂಡಿದ್ದಾರೆಯೇ?
ಶ್ರೀಮಂತರು, ದೊಡ್ಡ ಉದ್ಯಮಿಗಳು ದೇಶಬಿಟ್ಟು ಹೋಗುತ್ತಿದ್ದಾರೆ. 12 ಲಕ್ಷ ಪಾಸ್ಪೋರ್ಟ್ಗಳನ್ನು ಸರ್ಕಾರದ ವಶಕ್ಕೆ ನೀಡಿ ಈ ದೇಶದ ಕೋಟ್ಯಾಧಿಪತಿಗಳು ಬೇರೆ ದೇಶದ ಪೌರತ್ವ ತೆಗೆದುಕೊಂಡಿದ್ದಾರೆ. ನಮ್ಮ ದೇಶದ ಹಣ ಹೊರಗಡೆ ಹೋಗುತ್ತಿದೆ. ಹೆಸರು ಬದಲಾವಣೆಯಿಂದ ಏನೂ ಲಾಭವಿಲ್ಲ. ನಮ್ಮ ಆಚಾರ- ವಿಚಾರ ಬದಲಾವಣೆಯಾಗಬೇಕು.
ಸರ್ಕಾರ ಜನರ ಕಲ್ಯಾಣ ಮಾಡುವ ಹೊಸ ಕಾನೂನುಗಳನ್ನು ತರಬೇಕು. ನಮ್ಮ ಯುಪಿಎ ಸರ್ಕಾರ ಇದ್ದಾಗ ಮಾಹಿತಿಹಕ್ಕು, ಆರ್ಟಿಐ, ನರೇಗಾ, ಆಹಾರ ಭದ್ರತಾ ಕಾಯ್ದೆಗಳನ್ನು ಜಾರಿಗೆ ತಂದೆವು, ಇಂತಹ ಯೋಚನೆಗಳು ಬಿಜೆಪಿಯವರಿಗೆ ಬರುವುದಿಲ್ಲವೇ?”
ಗೃಹ ಸಚಿವ ಪರಮೇಶ್ವರ್ ಅವರು ಹಿಂದೂ ಧರ್ಮಕ್ಕೆ ಅಪ್ಪ- ಅಮ್ಮ ಯಾರು ಇಲ್ಲ ಎಂದು ಹೇಳಿದ್ದಾರೆ ಎನ್ನುವ ಪ್ರಶ್ನೆಗೆ “ನಾನು ಭಾರತೀಯ ಹಾಗೂ ಹಿಂದೂವಾಗಿರುವುದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ತಿಳಿಸಿದರು.
ಇನ್ನು ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡಿನ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವ ಬಗ್ಗೆ ಕೇಳಿದಾಗ, “ಕಾವೇರಿ ನೀರಿನ ವಿಚಾರವಾಗಿ ನಡೆಯುತ್ತಿರುವ ವಿಚಾರಣೆಯ ಜೂಮ್ ಲಿಂಕ್ ಅನ್ನು ನನಗೆ ಕಳುಹಿಸಿದ್ದರು. ನಾನು ವಿಚಾರಣೆಯನ್ನು ನೋಡಲು ಕಾಯುತ್ತಿದೆ. ಆದರೆ ವಿಚಾರಣೆಯನ್ನು ಸುಪ್ರೀಂಕೋರ್ಟಿನವರು ಮುಂದಕ್ಕೆ ಹಾಕಿದ್ದಾರೆ. ಕಳೆದೆರಡು ದಿನಗಳಲ್ಲಿ ಮಳೆ ಬರುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಮಳೆಯಾಗಿಲ್ಲ. ಹೀಗಾಗಿ ನಾವು ಮತ್ತೆ ಕಾಯಬೇಕು” ಎಂದು ತಿಳಿಸಿದರು.
ಬಿಜೆಪಿ ನಾಯಕಿಯನ್ನು ಭೇಟಿಯಾದ ಡಿಕೆಶಿ :
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಅವರ ಕೆ ಆರ್ ಪುರಂ ದೇವಸಂದ್ರದ ನಿವಾಸಕ್ಕೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬುಧವಾರ ಭೇಟಿ ನೀಡಿದ್ದರು.