ಬೆಂಗಳೂರು:
“ಬಿಜೆಪಿ ಸರ್ಕಾರದ ವಿರುದ್ಧ ಕೋವಿಡ್ ಹಗರಣ, ಆಮ್ಲಜನಕ ದುರಂತ, ಪಿಎಸ್ಐ ಸೇರಿದಂತೆ ನಾವು ನೂರಾರು ಆರೋಪ ಮಾಡಿದ್ದೇವೆ. ಅವರು ಯಾವ ರೀತಿ ತನಿಖೆ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದುವರೆಯುತ್ತಾ ಇದ್ದೇವೆ. ಬಿಜೆಪಿಯವರು ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯ ಏಕೆ?” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.
ಸದಾಶಿವನಗರ ನಿವಾಸ ಹಾಗೂ ಶೇಷಾದ್ರಿಪುರ ಅಪೋಲೋ ಆಸ್ಪತ್ರೆ ಬಳಿ ಮಾಧ್ಯಮಗಳು ರಾಜ್ಯ ಸರ್ಕಾರ ಕೋವಿಡ್ ಹಗರಣಗಳನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರ ಹಿಂದೆ ದ್ವೇಷ ರಾಜಕೀಯವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ನನ್ನನ್ನು ಭೇಟಿಯಾಗಿ ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ್ದೇವೆ. ಬಿಜೆಪಿಯವರು ಈ ಪ್ರಕರಣದಲ್ಲಿ ಏನು ಮಾಡಿದರು? ತನಿಖೆ ನಡೆಯುವುದ್ದಕ್ಕೆ ಮುಂಚಿತವಾಗಿಯೇ ಅಂದಿನ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಯಡಿಯೂರಪ್ಪ ಅವರೆಲ್ಲಾ “ಈಶ್ವರಪ್ಪ ದೋಷಮುಕ್ತರಾಗಿ” ಬರುತ್ತಾರೆ ಎಂದು ತನಿಖಾಧಿಕಾರಿಗಳಿಗೆ ಸುಳಿವು ನೀಡಿದರು. ಆದರೆ ನಾವು ಈ ರೀತಿಯ ಕೆಲಸ ಮಾಡಲು ಹೋಗುವುದಿಲ್ಲ, ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಕಾನೂನಿನ ಚೌಕಟ್ಟಿನಲ್ಲೇ ತನಿಖಾ ಆಯೋಗ ರಚಿಸಿದ್ದೇವೆ.
ಇದರಲ್ಲಿ ಯಾವುದೇ ದ್ವೇಷ ರಾಜಕಾರಣವಿಲ್ಲ. ಬೊಮ್ಮಾಯಿ ಅವರಿಂದ ನಮಗೆ ಪ್ರಮಾಣ ಪತ್ರ ಬೇಡ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಿದ್ದರು. ಆದರೆ ಆಗಿನ ಸಚಿವರು ಕೇವಲ 3 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಹೊಳೆಗಾರಿಕೆ ಮಾಡಿಲ್ಲ. ಯಾರ ವಿರುದ್ಧವೂ ಕ್ರಮ ಕೈಗದೊಂಡಿಲ್ಲ. ಈ ಪ್ರಕರಣ ತನಿಖೆ ಆಗಬಾರದೇ? ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ವೆಚ್ಚದ ದರಕ್ಕೂ ರಾಜ್ಯ ಸರ್ಕಾರದ ವೆಚ್ಚದ ದರಕ್ಕೂ ಭಾರಿ ವ್ಯತ್ಯಾಸವಿದೆ. ಇನ್ನು ಬೆಡ್ ಬ್ಲಾಕಿಂಗ್ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಇದೆಲ್ಲದರ ಬಗ್ಗೆ ತನಿಖೆ ಮಾಡಬೇಕಲ್ಲವೇ? ಇನ್ನು ಸರ್ಕಾರ ರೂಪಿಸಿದ 10 ಸಾವಿರ ಬೆಡ್ ಗಳ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆಲಿಲ್ಲ. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿ ರಾಜ್ಯದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಬದ್ಧತೆ” ಎಂದು ತಿಳಿಸಿದರು.
“ಬಿಜೆಪಿ ನಾಯಕರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ, ನಾವು ಕಷ್ಟ ಅನುಭವಿಸುವಂತೆ ಮಾಡಿಲ್ಲವೇ? 79 a,b ಎಷ್ಟು ಪ್ರಕರಣಗಳು ಇದ್ದವು, ಎಷ್ಟೊಂದು ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಬೇಕಿತ್ತು, ಆಸ್ತಿಗಳ ಮೌಲ್ಯ ಮಾಪನದಲ್ಲಿ ಅಕ್ರಮ ಎಸಗಿಲ್ಲವೇ? ಹೀಗೆ ಬೆಂಗಳೂರು ಸುತ್ತಾ ಮುತ್ತಾ ನಡೆದಿರುವ ಭೂ ಹಗರಣಗಳ ಪಟ್ಟಿ ಹೇಳುತ್ತಾ ಹೋಗಲೇ? ನಾವು ಇನ್ನೂ ಏನೇನು ತೆಗೆಯಬೇಕು ಕೇಳಿ ಅವರನ್ನು, ನನ್ನ ಬಳಿ ಇರುವ ಎಲ್ಲವನ್ನು ಹೊರಗೆ ತೆಗೆಯುತ್ತೇವೆ” ಎಂದು ಸವಾಲು ಹಾಕಿದರು.
*ನೈಸ್ ವಿಚಾರವಾಗಿ ಯಾವುದೇ ದಾಖಲೆ ಬಿಚ್ಚಿಡಲಿ, ನಮ್ಮ ಬಳಿಯೂ ಪಟ್ಟಿಗಳಿವೆ:*
ಮಾಜಿ ಪ್ರಧಾನಿ ದೇವೆಗೌಡರು ನೈಸ್ ವಿಚಾರವಾಗಿ ಪತ್ರಿಕಾಗೋಷ್ಠಿ ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ “ಏನು ಬೇಕಾದರೂ ಮಾಡಲಿ, ಯಾವುದೇ ದಾಖಲೆ ಬಿಚ್ಚಿಡಲಿ. ಎಲ್ಲಿಗೆ ಬೇಕಾದರೂ ಹೋಗಲಿ, ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ತನಿಖೆ ಮಾಡುವ ಅಧಿಕಾರ ಎಲ್ಲರಿಗೂ ಇತ್ತು. ಈಗಲೂ ತನಿಖೆಗೆ ದೂರು ಕೊಟ್ಟು ತನಿಖೆ ಮಾಡಿಸಲಿ.
ಈ ರಾಜ್ಯದ ರಾಜಕಾರಣಿಗಳು ಹಾಗೂ ಕುಟುಂಬದವರದ್ದೂ ಇಲ್ಲವೇ? ಯಾವ ಅಧಿಕಾರಿ ಇದ್ದರು, ಯಾವ ರೈತರು ಇದ್ದರು, ಎಲ್ಲ ಪಟ್ಟಿಯೂ ನನ್ನ ಬಳಿ ಇದೆ. ನನಗೆ ಏನು ಬೇಕಾದರೂ ಮಾಡಲಿ. ಏಕೆಂದರೆ ಈಗಾಗಲೇ ಸಿಬಿಐ, ಇಡಿಯವರು ಏನೇನು ಸ್ಕ್ಯಾನ್ ಮಾಡಬೇಕೋ ಎಲ್ಲವನ್ನು ನನ್ನ ವಿರುದ್ಧ ಮಾಡಿದ್ದಾರೆ. ನೈಸ್ ವಿಚಾರ ಏನೂ ಹೊಸದಲ್ಲ” ಎಂದು ತಿಳಿಸಿದರು.
*ಸಿಎಂ ಆಗಿದ್ದಾಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದವರು ಈಗ ವಿರೋಧ ಏಕೆ?*
ವೈದ್ಯಕೀಯ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ವರ್ಗಾವಣೆ ಮಾಡುತ್ತಿರುವುದ್ದಕ್ಕೆ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ “ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿವೇಶನದಲ್ಲಿ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಮನವಿ ಮಾಡಿದ್ದೇ. ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದರು. ನಮಗೆ ನಮ್ಮ ಕ್ಷೇತ್ರದ ಮೇಲೆ ಸ್ವಾರ್ಥ, ಅಭಿಮಾನ ಇಲ್ಲವೇ. ಈಗ ಏಕೆ ರಾಜಕೀಯ. ಪ್ರಸ್ತುತ ವೈದ್ಯಕೀಯ ಕಾಲೇಜು ರಾಮನಗರ ಕ್ಷೇತ್ರದ ಗಡಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿದೆ. ಎರಡು ತಾಲ್ಲೂಕುಗಳಿಗೆ ಉಪಯೋಗವಾಗಲಿ ಎಂದು ಇರುವ ಆಸ್ಪತ್ರೆ ಇದಾಗಿದೆ.
ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಈ ಆಸ್ಪತ್ರೆ ನಿರ್ಮಾಣ ಪೂರ್ಣವಾಗಿ, ಉದ್ಘಾಟನೆಗೊಳ್ಳಬೇಕು ಎನ್ನುವ ಹೊತ್ತಿನಲ್ಲಿ ಯಡಿಯೂರಪ್ಪ ಅವರ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿತು. ಆಗ ಯಡಿಯೂರಪ್ಪ ಅವರು ರಾಮನಗರಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಬೊಮ್ಮಾಯಿಯವರ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿದ್ದೇವು ಆಗ ವಿಧಾನಸಭಾ ಅಧಿವೇಶನದಲ್ಲೂ ಭರವಸೆ ನೀಡಿದ್ದರು. ಈಗ ನಾವೇನು ಬದಲಾವಣೆ ಮಾಡಿಲ್ಲ, ಎರಡೂ ತಾಲ್ಲೂಕುಗಳ ಜನರಿಗೆ ಉಪಯೋಗವಾಗಲಿ ಎಂದು ಈ ತೀರ್ಮಾನ ಮಾಡಿದ್ದೇವೆ. ವಿಶ್ವವಿದ್ಯಾಲಯ ಅಲ್ಲಿಯೇ ಇರುತ್ತದೆ. ಆಸ್ಪತ್ರೆ ಎರಡೂ ಕಡೆ ಇರುತ್ತದೆ.
ಇದೇ ಕುಮಾರಸ್ವಾಮಿ ಅವರು ಪ್ರತಿಭಟನೆ ಮಾಡಲಿ. ಅವರೇ ಬಜೆಟ್ ಭಾಷಣ ಮಾಡುವಾಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು ಎಂದು ಓದಿದ ಸಾಕ್ಷಿ ಇದೆ. ಈಗ ಏಕೆ ಈ ಹೋರಾಟ? ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೆ ಇದೆಲ್ಲಾ ಮಾಡಲು ಹೊರಟಿದ್ದಾರೆ. ಮಾಡಲಿ ಬಿಡಿ. ಆಗ ಬುದ್ದಿ ಇರಲಿಲ್ಲವೇ ಅವರಿಗೆ, ನಮ್ಮ ಎಂಬತ್ತು ಜನ ಶಾಸಕರ ಬೆಂಬಲದಿಂದ ಅವರು ಮುಖ್ಯಮಂತ್ರಿಗಳಾಗಿದ್ದು ನೆನಪಿರಲಿ” ಎಂದು ಹೇಳಿದರು.
*ಮತ ಪ್ರಮಾಣ ಹೆಚ್ಚಿಸಿಕೊಳ್ಳುವತ್ತ ಮಾತ್ರ ನಮ್ಮ ಗಮನ*
ಅನ್ಯ ಪಕ್ಷಗಳ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಅನ್ಯ ಪಕ್ಷಗಳ ಶಾಸಕರು ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ನಾವು ಬೇರೆ ಪಕ್ಷಗಳ ಶಾಸಕರನ್ನು ಕರೆದುಕೊಳ್ಳುವುದಕ್ಕಿಂತ ನಮ್ಮ ಮತ ಪ್ರಮಾಣ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನಹರಿಸುತ್ತಿದ್ದೇವೆ” ಎಂದು ತಿಳಿಸಿದರು.
ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಬೇರೆ ಶಾಸಕರು ನಿಮ್ಮ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲವೇ ಎಂದು ಕೇಳಿದಾಗ, “ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ನಾವು ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೂ ಜನರಿಗೆ ನೆರವಾಗಿ ಅವರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ. ನಮಗೆ ಇಡಿ ರಾಜ್ಯದ ಅಭಿವೃದ್ಧಿ ಬಹಳ ಮುಖ್ಯ. ಸೋಮಶೇಖರ್ ಅವರು ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ರಾಜಕೀಯ ಯಾಕೆ ಮಾಡಬೇಕು?” ಎಂದು ತಿಳಿಸಿದರು.
*ಗೃಹಲಕ್ಷ್ಮಿ ಸರ್ಕಾರಿ ಕಾರ್ಯಕ್ರಮ, ಫಲಾನುಭವಿಗಳಿಗೆ ಆಮಂತ್ರಣ ನೀಡಿದ್ದೇವೆ:*
ಗೃಹಲಕ್ಷ್ಮಿ ಕಾರ್ಯಕ್ರಮ ಯಶಸ್ಸುಗೊಳಿಸಲು ಅಧಿಕಾರಿಗಳಿಗೆ ಜನ ಸೇರಿಸುವ ಜವಾಬ್ದಾರಿ ನೀಡಲಾಗಿದೆ ಎಂಬ ಬಗ್ಗೆ ಕೇಳಿದಾಗ, “ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ಜನರನ್ನು ಯಾರು ಸೇರಿಸಬೇಕಿಲ್ಲ. ನಾವು ಕೇವಲ ಆಮಂತ್ರಣ ನೀಡುತ್ತೇವೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಪಕ್ಷಬೇಧ ಮರೆತು ಕಾರ್ಯಕ್ರಮ ಮಾಡಬೇಕು. ಬಿಜೆಪಿ ಹಾಗೂ ದಳದ ಶಾಸಕರುಗಳು ಅವರ ಅಧ್ಯಕ್ಷತೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದೇವೆ. ಕಾಂಗ್ರೆಸ್ ಪಕ್ಷದ ಪರವಾಗಿ ಜನ ಸೇರಿಸುವುದನ್ನು ಅವರು ನನಗೆ ಹೇಳಿಕೊಡಬೇಕಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ಅವರಂತೆ ಶಆಲೆ ಕಾಲೇಜುಗಳಿಗೆ ಪತ್ರ ಬರೆದು ಮಕ್ಕಳನ್ನು ಕರೆ ತನ್ನಿ ಎಂದು ಹೇಳುತ್ತಿಲ್ಲ. ನಾವು ಕಾರ್ಯಕ್ರಮಕ್ಕೆ ಆಗಮಿಸುವಂತೆ ಈ ಯೋಜನೆ ಫಲಾನುಭವಿಗಳಿಗೆ ಆಮಂತ್ರಣ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಗೃಹಲಕ್ಷ್ಮಿ ಕಾರ್ಯಕ್ರಮ ಪೂರ್ವಸಿದ್ಧತೆ ಪರಿಶೀಲನೆಗಾಗಿ ಮೈಸೂರಿಗೆ ಪ್ರಯಾಣ ಮಾಡುತ್ತಿದ್ದೇನೆ. ನಮ್ಮ ಸರ್ಕಾರಕ್ಕೆ ನೂರು ದಿನಗಳ ಪೂರ್ಣಗೊಂಡಿವೆ. ಚುನಾವಣೆ ಸಮಯದಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ನಾಡದೇವತೆ ತಾಯಿ ಚಾಂಮುಂಡೇಶ್ವರಿ ಸನ್ನಿಧಾನಕ್ಕೆ ಹೋಗಿ, ಗ್ಯಾರಂಟಿ ಕಾರ್ಡ್ ಗೆ ಸಹಿ ಹಾಕಿ ಈ ಯೋಜನೆ ಜಾರಿ ಮಾಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಹೀಗಾಗಿ ಈ ಯೋಜನೆಯನ್ನು ತಾಯಿಯ ಆಶೀರ್ವಾದದ ಮೂಲಕ ಜಾರಿ ಮಾಡಲು ಈ ಕಾಯ್ರಕ್ರಮ ಮಾಡುತ್ತಿದ್ದೇವೆ. ಎಐಸಿಸಿ ಎಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಏವರು ಸೇರಿದಂತೆ ಎಐಸಿಸಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.