ಕನಕಪುರ:
“ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾ ಅನ್ನು ರಿಪಬ್ಲಿಕ್ ಆಫ್ ಭಾರತ ಮಾಡಲು ಹೊರಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರದಲ್ಲಿ ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮುಂದಿನ ಚುನಾವಣೆಯಲ್ಲಿ ಸೋಲನ್ನು ನೋಡುತ್ತಿರುವುದನ್ನು ಈ ಸಮಯದಲ್ಲಿ ಗಮನಿಸಬಹುದು. ನಮ್ಮ ದೇಶದ ನಗದಿನ ಮೇಲೆ ಇಂಡಿಯಾ ಅಂತಾ ಇದೆ. ಇದನ್ನು ಬದಲಿಸಲು ಹೊರಟಿದ್ದಾರೆ.
ನಾವೆಲ್ಲರೂ ಭಾರತೀಯರೇ. ಸೋಲಿಗೆ ಹೆದರಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಅವರ ಆಲೋಚನೆಗಳು ಇನ್ನು ಬಹಳ ಇದಾವೆ. ಅವುಗಳನ್ನು ಈಗ ಹೇಳಿದರೆ ಎಲ್ಲರೂ ಶಾಕ್ ಆಗುತ್ತಾರೆ. ಅವುಗಳನ್ನು ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಪ್ರಸ್ತಾವನೆಯನ್ನು ವಿರೋಧಿಸುತ್ತೇನೆ. ಇಂತಹ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಮಾಡಬೇಡಿ” ಎಂದು ತಿಳಿಸಿದರು.
ವಿರೋಧ ಪಕ್ಷಗಳ ಮೈತ್ರಿ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಬೆಂಗಳೂರಿನಲ್ಲಿ ಹುಟ್ಟಿತು. ಬೆಂಗಳೂರಿನಲ್ಲಿ ಬದಲಾವಣೆ ಆರಂಭವಾಯಿತು. ಇದೇ ತಿಂಗಳು 16,17ರಂದು ತೆಲಂಗಾಣದ ಹೈದರಾಬಾದ್ ನಲ್ಲಿ ಸಭೆ ಸೇರುತ್ತಿದ್ದು, ಎಲ್ಲಾ ಮೈತ್ರಿ ಪಕ್ಷಗಳು ಸೇರಿ ಮುಂದಿನ ತೀರ್ಮಾನ ಮಾಡಲಿವೆ” ಎಂದು ತಿಳಿಸಿದರು.