ಬೆಂಗಳೂರು :
“ರಾಮನಗರದಲ್ಲಿ ಬಿಜೆಪಿಯವರು ವಕೀಲರನ್ನು ತಪ್ಪು ದಾರಿಗೆಳೆದು ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತ. ರಾಜಕಾರಣ ಬಿಟ್ಟು ವಕೀಲರು ಚರ್ಚೆಗೆ ಬಂದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಮನಗರದ ವಕೀಲರ ಮೇಲಿನ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ಮಂಗಳವಾರ ಉತ್ತರಿಸಿದ್ದು ಹೀಗೆ;
“ರಾಮನಗರದಲ್ಲಿ ರಾಜಕಾರಣ ನಡೆಯುತ್ತಿದೆ. ಬಿಜೆಪಿಯವರು ವಕೀಲರನ್ನು ದಾರಿ ತಪ್ಪಿಸಿದ್ದಾರೆ. ರಾಜಕಾರಣ ಮಾಡುವವರನ್ನು ನಾನು ಬೇಡ ಎನ್ನುವುದಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಲು ಕುಮಾರಸ್ವಾಮಿ ಅವರು ಸದನದಲ್ಲಿ ಸಮಯ ಕೇಳಿದ್ದಾರಂತೆ. ಅದಕ್ಕೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಕಾನೂನು ಬದ್ಧವಾಗಿ ಅಧಿಕಾರಿಗಳು ಎಲ್ಲರಿಗೂ ರಕ್ಷಣೆ, ಗೌರವ ನೀಡಬೇಕು. ನಮ್ಮ ಬಳಿ ಬಂದು ಕೂತು ಮಾತನಾಡಿದರೆ ಚರ್ಚೆಗೆ ಸಿದ್ಧ. ರಾಜಕಾರಣವನ್ನೇ ಮಾಡುತ್ತೀವಿ ಎಂದರೆ ರಾಜಕಾರಣ ಮಾಡಿಕೊಳ್ಳಲಿ, ನಮ್ಮ ಅಭ್ಯಂತರವೇನೂ ಇಲ್ಲ.”
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿಂದಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ನನಗೆ ಮಧ್ಯಪ್ರವೇಶಿಸುವ ಇಚ್ಛೆಯೂ ಇಲ್ಲ. ಅವರುಗಳು ಬಂದು ತಮ್ಮ ನೋವನ್ನು ಹೇಳಿಕೊಂಡರೆ, ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇನೆ. ನಮಗೆ ವಕೀಲರು, ಅಧಿಕಾರಿಗಳು, ಸಾರ್ವಜನಿಕರ ಬಗ್ಗೆ ಸಮಾನ ಗೌರವವಿದೆ” ಎಂದರು.
ಕೇರಳದಲ್ಲಿ ಆನೆ ತುಳಿತಕ್ಕೆ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದರು.