ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮದ ಸಿದ್ಧತೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮುಖಾಮುಖಿಯಾಗಿ ಗಮನ ಸೆಳೆದರು. ಸತೀಶ್ ಜಾರಕಿಹೊಳಿ ತರಿಸಿದ್ದ ಮಿರ್ಚಿ ಬಜ್ಜಿಯನ್ನು ಡಿಕೆಶಿ ಸವಿದರು.
ಬೆಳಗಾವಿ: ದೇಶದ ಸ್ವಾತಂತ್ರ್ಯ, ಸಂವಿಧಾನ, ಐಕ್ಯತೆ, ಗಾಂಧಿ ತತ್ವ, ಅಂಬೇಡ್ಕರ್ ಅವರ ನೀತಿ ರಕ್ಷಣೆ ಮಾಡಲು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸಮಾವೇಶದ ತಯಾರಿ ಪರಿಶೀಲನೆ ಬಳಿಕ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿದರು.
“ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಐಸಿಸಿ ನಾಯಕರು ಈ ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟಿದ್ದಾರೆ. ಸಂವಿಧಾನ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಬಗ್ಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲಾಗುವುದು” ಎಂದು ತಿಳಿಸಿದರು.
“ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಇದು ದೇಶದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ, ಗಾಂಧೀಜಿ, ಅಂಬೇಡ್ಕರ್, ಸಂವಿಧಾನದ ಆದರ್ಶ, ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಯಾರು ಬೇಕಾದರೂ ಈ ಸಮಾವೇಶಕ್ಕೆ ಆಗಮಿಸಬಹುದು. ಈ ಸಮಾವೇಶದಲ್ಲಿ ಭಾಗವಹಿಸಿ ನೀವೆಲ್ಲರೂ ಇತಿಹಾಸದ ಪುಟಕ್ಕೆ ಸೇರಬೇಕು” ಎಂದು ತಿಳಿಸಿದರು.
“ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಆಚರಣೆ ಸಮಯದಲ್ಲಿ ನಮ್ಮದೇ ರಾಜ್ಯದ ನಾಯಕರಾದ, ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಏರಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆ ಸ್ಥಾನದಲ್ಲಿ ಕೂತಿರುವುದು ವಿಶೇಷ. ಇವರ ಜತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ” ಎಂದರು.
“ಸುವರ್ಣಸೌಧದಲ್ಲಿ ವಿಶೇಷವಾದ ಗಾಂಧಿ ಪ್ರತಿಮೆ ನಿರ್ಮಿಸಲಾಗಿದ್ದು ಇದರ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿದೆ” ಎಂದು ತಿಳಿಸಿದರು.
*ಗಾಂಧಿ ಭಾರತ ಅಂಗವಾಗಿ ಅನೇಕ ಕಾರ್ಯಕ್ರಮ:*
ಗಾಂಧಿ ಭಾರತ ಹಿನ್ನೆಲೆಯಲ್ಲಿ ಹೊಸದಾದ ಕಾರ್ಯಕ್ರಮ ಘೋಷಣೆ ಮಾಡಿತ್ತೀರಾ ಎಂದು ಕೇಳಿದಾಗ, “ನಮ್ಮ ನಾಯಕರಾದ ಹೆಚ್. ಕೆ ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್ ಶಂಕರ್, ಮುನಿಯಪ್ಪ, ರೆಹಮಾನ್ ಖಾನ್ ಅವರ ನೇತೃತ್ವದ ಸಮಿತಿ ನಮಗೆ ಅನೇಕ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಶಾಲಾ ಕಾಲೇಜುಗಳಿಂದ ಬೇರೆ ಬೇರೆ ಕಡೆಗಳಲ್ಲಿ ಇದನ್ನು ಆಚರಿಸಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕಾಗಿ ಬಜೆಟ್ ನಲ್ಲಿ ಹಣ ಇಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು” ಎಂದು ತಿಳಿಸಿದರು.
ಬೆಳಗಾವಿಗೆ ವಿಶೇಷ ಕೊಡುಗೆ ನೀಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ನೀಡುತ್ತೇವೆ. ಇಡೀ ದೇಶ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿಯತ್ತ ತಿರುಗಿ ನೋಡುತ್ತಿದೆ. ಅಂದೇ ಕಾಂಗ್ರೆಸ್ ದೇಶಕ್ಕೆ ಬೆಳಗಾವಿ ಪರಿಚಯಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದರು.
ಸಚಿವ ಸಂಪುಟ ವಿಸ್ತರಣೆ ಆದರೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುತ್ತೀರಾ ಎಂದು ಕೇಳಿದಾಗ, “ಬೆಳಿಗ್ಗೆ ಉಪಹಾರ ಕೂಟದಲ್ಲಿ ಈ ವಿಚಾರ ಚರ್ಚೆ ಮಾಡುತ್ತೇನೆ” ಎಂದರು.
*ಶೋಕಾಚಾರಣೆ ಹಿನ್ನೆಲೆಯಲ್ಲಿ ದೀಪಾಲಂಕಾರ ಸ್ಥಗಿತ*
ಬೆಳಗಾವಿಯಲ್ಲಿ ದೀಪಾಲಂಕಾರ ಇನ್ನು ಕೆಲಕಾಲ ಮುಂದುವರಿಸಬೇಕಿತ್ತು ಎಂದು ಕೇಳಿದಾಗ, “ಹೊಸವರ್ಷದ ಮೊದಲ ವಾರದವರೆಗೂ ಮುಂದುವರಿಸಲು ಆಲೋಚನೆ ಇತ್ತು, ಶೋಕಾಚಾರಣೆ ಇದ್ದ ಕಾರಣ ಅದನ್ನು ಸ್ಥಗಿತಗೊಳಿಸಲಾಯಿತು. ದೇಶದ ಮಾಜಿ ಪ್ರಧಾನಮಂತ್ರಿಗೆ ನಾವು ಗೌರವ ನೀಡಲೇಬೇಕು” ಎಂದು ತಿಳಿಸಿದರು.