ಬೆಂಗಳೂರು:
“ಗುತ್ತಿಗೆದಾರರು ನೋವಿನಲ್ಲಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಅವರು ಮೊದಲು ಉತ್ತರ ನೀಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಿ ಎಂದು ಹೇಳಿದ್ದ ಗುತ್ತಿಗೆದಾರ ಹೇಮಂತ್ ಮತ್ತಿತರರು ತಮ್ಮ ಹೇಳಿಕೆ ವಾಪಸ್ ಪಡೆದ ಬಗ್ಗೆ ಮಾಧ್ಯಮದವರು ಕೆಪಿಸಿಸಿ ಕಚೇರಿಯಲ್ಲಿ ಗಮನ ಸೆಳೆದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.
“ಗುತ್ತಿಗೆದಾರರು ನೋವಿನಲ್ಲಿ ಇದ್ದಾರೆ, ಅವರ ವಿಚಾರಕ್ಕೆ ನಾನು ಹೋಗುವುದಿಲ್ಲ, ಆದರೆ ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಗೋಪಾಲಯ್ಯ, ಸಿ ಟಿ ರವಿ ಇವರೆಲ್ಲಾ ಮೊದಲು ಉತ್ತರ ಕೊಡಲಿ. ಆಮೇಲೆ ಮಿಕ್ಕ ವಿಚಾರ ಮಾತನಾಡುತ್ತೇನೆ” ಎಂದು ಛೇಡಿಸಿದರು.
ಬಿಜೆಪಿ ನಾಯಕರ ಅಕ್ರಮಗಳ ಬಗ್ಗೆ ನಿಮ್ಮ ಬಳಿ ದಾಖಲೆಗಳಿವೆಯೇ ಎನ್ನುವ ಪ್ರಶ್ನೆಗೆ “ನಮ್ಮ ಅಜ್ಜಯ್ಯನ ಸಹವಾಸ ಏನು ಎಂದು ಅವರಿಗೆಲ್ಲಾ ಗೊತ್ತಿಲ್ಲ. ನಾನೀಗ ತಕ್ಷಣಕ್ಕೆ ಉತ್ತರ ನೀಡಲು ಹೋಗುವುದಿಲ್ಲ. ನಮಗೆ ನವರಂಗಿದು, ಚಕ್ರವರ್ತಿದು ಎಲ್ಲರದ್ದೂ ಗೊತ್ತಿದೆ. ಎಲ್ಲವನ್ನು ಒಮ್ಮೆಗೆ ಬಿಟ್ಟರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಇದಕ್ಕೆಲ್ಲ ಆನಂತರ ಉತ್ತರಿಸುವೆ. ಶಾರ್ಕ್ ಮೀನಿನಂತಹ ಒಂದಷ್ಟು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲವಾದರೂ ಬಿಲ್ ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ. ನಮಗೆ ಜನರ ಹಣದ ಮೇಲೆ ಜವಾಬ್ದಾರಿ ಇದೆ. ಸತ್ಯಶೋಧನೆಯ ವರದಿ ಬರಲಿ. ಆಗ ಪ್ರಾಮಾಣಿಕ ಗುತ್ತಿಗೆದಾರರಿಗೆ ಹಣ ನೀಡುತ್ತೇವೆ” ಎಂದು ಹೇಳಿದರು.
“ಎಲ್ಲಾ ಅಕ್ರಮಗಳ ನಾಯಕ ಅಶ್ವತ್ ನಾರಾಯಣ. ಇವರು ದೊಡ್ಡ ಇತಿಹಾಸವನ್ನೇ ಹೊಂದಿದ್ದಾರೆ. ನಮ್ಮ ಗ್ಯಾರಂಟಿ ಸರ್ಕಾರದ ಜನಪ್ರಿಯತೆ ಸಹಿಸದೆ ಮೊದಲ ದಿನದಂದಲೂ ಆಧಾರರಹಿತ ಆರೋಪ ಮಾಡುತ್ತಲೇ ಇದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗದವರು ಸುಳ್ಳು ಆರೋಪಗಳ ಮೊರೆ ಹೋಗಿದ್ದಾರೆ” ಎಂದು ಚಾಟಿ ಬೀಸಿದರು.
ಗುತ್ತಿಗೆದಾರರು ನಿಮ್ಮನ್ನು ಬಂದು ಭೇಟಿ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ನಮ್ಮನ್ನು ಬಂದು ಯಾರು ಬೇಕಾದರೂ ಭೇಟಿಯಾಗಲಿ. ಈಗಾಗಲೇ ಮುನಿರತ್ನ ಭೇಟಿಯಾಗಿದ್ದರು. ಚಿಕ್ಕಪೇಟೆ ಶಾಸಕರು ಬಂದು ಭೇಟಿಯಾಗಿದ್ದರು. ಯಾರು ಬಂದು ಭೇಟಿ ಆಗುವುದ್ದಕ್ಕೂ ಅಭ್ಯಂತರವಿಲ್ಲ” ಎಂದು ತಿಳಿಸಿದರು.
“ಇದೇ ಬಿಜೆಪಿ ಸರ್ಕಾರ ಇದ್ದಾಗ 2 ವರ್ಷ ಯಾವುದೇ ಕಾಮಗಾರಿಗಳ ಬಿಲ್ಗಳನ್ನು ಬಿಡುಗಡೆ ಮಾಡಲಿಲ್ಲ ಯಾಕೆ? ನಾವು ಯಾವ ಕಾಮಗಾರಿಗಳು ನಡೆದಿವೆ, ನಡೆದಿಲ್ಲ ಎಂದು ಪರಿಶೀಲಿಸುವುದಕ್ಕೆ ಸಮಿತಿ ಮಾಡಿದ್ದೇವೆ. ಅಲ್ಲಿಂದ ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ವಿವರಣೆ ನೀಡಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು “ಕಾಂಗ್ರೆಸ್ ಸರ್ಕಾರ ಯಾವುದೇ ಕಮಿಷನ್ ಕೇಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ರಾಜ್ಯಪಾಲರಿಗೆ ಪತ್ರ ಬರೆದಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ನನ್ನನ್ನು ಭೇಟಿಯಾಗಿದ್ದರು. ನಾವು ಬಿಜೆಪಿಯವರ ಮಾತು ಕೇಳಿ ಈ ಕೆಲಸ ಮಾಡಿದೆವು, ನಮ್ಮದು ಯಾವುದೇ ಆರೋಪಗಳಿಲ್ಲ ಎಂದು ಹೇಳಿದ್ದಾರೆ” ಎಂದು ಸ್ಪಷ್ಟಪಡಿಸಿದರು.
“ಕರ್ನಾಟಕ ಗುತ್ತಿಗೆದಾರರ ಸಂಘದವರನ್ನು ನಾನು ಇದುವರೆಗೂ ಭೇಟಿಯಾಗಿಲ್ಲ. ಆದರೆ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೋ ಅಂತಹವರು ತಮ್ಮ ಹಣ ಪಡೆಯಲಿದ್ದಾರೆ. ನಾನು ಕರ್ನಾಟಕದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಹೊಂದಿದ್ದೇನೆ” ಎಂದರು.
ಕರ್ನಾಟಕದಲ್ಲಿ ಡಿಸಿಎಂ ಟ್ಯಾಕ್ಸ್ ಇದೆ ಎನ್ನುವ ಅಶ್ವಥ ನಾರಾಯಣ ಅವರ ಆರೋಪಕ್ಕೆ ಉತ್ತರಿಸುತ್ತಾ, “ನಾನು ಎಷ್ಟು ಟ್ಯಾಕ್ಸ್ ಕಟ್ಟುತ್ತೇನೆ ಎನ್ನುವುದನ್ನು ತಿಳಿಸುತ್ತೇನೆ. ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು ಸಿದ್ದನಿದ್ದೇನೆ. ಮೊದಲು ಅವರು ಬಿಜೆಪಿಯನ್ನು ಶುದ್ದಿ ಮಾಡಲಿ. ರಾಮನಗರ ಶುದ್ದ ಮಾಡುತ್ತೇನೆ ಎಂದು ಬಂದರು. ಆದರೆ ಬಿಜೆಪಿ ಕಚೇರಿ ತೆರೆಯಲು ಅವರ ಕೈಲಿ ಆಗಲಿಲ್ಲ. ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಎಲ್ಲಾ ಆಗಿದ್ದರೂ ಒಂದೇ ಒಂದು ನಗರ ಪಾಲಿಕೆ ಗೆಲ್ಲುವ ತಾಕತ್ತು ಅವರ ಬಳಿ ಇಲ್ಲ. ನಾನಲ್ಲ ನಮ್ಮ ರಾಮನಗರದ ಜನ ಸರಿಯಾದ ಉತ್ತರ ಕೊಟ್ಟು ಕಳಿಸಿದ್ದಾರೆ” ಎಂದು ತಿಳಿಸಿದರು.