ಮುಂಬೈ :
ಮಹಾರಾಷ್ಟ್ರ ನೂತನ ಉಪಮುಖ್ಯಮಂತ್ರಿ,
ಎನ್ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಭಾನುವಾರ (ಜುಲೈ 2) ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಜಿತ್ ಪವಾರ್, ಪಕ್ಷದ ಹಿತದೃಷ್ಟಿ ಹಾಗೂ ಮಹಾರಾಷ್ಟ್ರ ಜನತೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಈ ನಡುವೆ ಸುನೀಲ್ ತಟ್ಕರೆಯನ್ನು ಎನ್ಸಿಪಿ ರಾಜ್ಯಾಧ್ಯಕ್ಷರಾಗಿ ಅಜಿತ್ ಪವಾರ್ ಬಣದ ಪ್ರಫುಲ್ ಪಟೇಲ್ ಘೋಷಣೆ ಮಾಡಿದ್ದರೆ, ಪ್ರಫುಲ್ ಪಟೇಲ್ ಹಾಗೂ ಸುನೀಲ್ ತಟ್ಕರೆಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿರೋದಾಗಿ ಎನ್ಸಿಪಿ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಈ ನಡುವೆ ನಿರಂತರ ಪ್ರಚಾರದಲ್ಲಿರುವ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಅವರು ಏನು ಮಾಡ್ತಾರೆ, ಅವರ ಆಸ್ತಿಯೆಷ್ಟು ಎನ್ನುವ ವಿವರಗಳು ಇಲ್ಲಿವೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಸುನೇತ್ರಾ ಪ್ರಸಿದ್ಧ ಶಿಕ್ಷಣ ಸಂಸ್ಥೆ ವಿದ್ಯಾ ಪ್ರತಿಷ್ಠಾನದ ಟ್ರಸ್ಟಿಯಾಗಿದ್ದು, ಇದಕ್ಕೆ ಶರದ್ ಪವಾರ್ ಅವರು ಅಧ್ಯಕ್ಷರಾಗಿದ್ದಾರೆ. ಅವರು 2011 ರಿಂದ ಫ್ರಾನ್ಸ್ನ ಚಿಂತಕರ ಚಾವಡಿಯಾದ ವಿಶ್ವ ವಾಣಿಜ್ಯೋದ್ಯಮ ವೇದಿಕೆಯ ಸದಸ್ಯರಾಗಿದ್ದರು. ಅವರು ತಮ್ಮ ಎನ್ಜಿಒ ಎನ್ವಿರಾನ್ಮೆಂಟಲ್ ಫೋರಮ್ ಆಫ್ ಇಂಡಿಯಾ ಮೂಲಕ ಪರಿಸರ ಜಾಗೃತಿಗಾಗಿ ಕೆಲಸ ಮಾಡುತ್ತಿದ್ದಾರೆ. ಸುನೇತ್ರಾ ಪವಾರ್ ಅವರನ್ನು ಬಹುಮುಖ ಪ್ರತಿಭೆ ಎಂದೂ ಹೇಳಲಾಗುತ್ತದೆ.
ರಾಜಕೀಯ-ಕುಟುಂಬ ಎರಡನ್ನೂ ನಿರ್ವಹಣೆ ಮಾಡುವ ಸುನೇತ್ರಾ: ರಾಜಕೀಯ ಮತ್ತು ಕೌಟುಂಬಿಕ ವ್ಯವಹಾರವನ್ನು ನಿರ್ವಹಿಸುವುದರೊಂದಿಗೆ ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ಸುನೇತ್ರಾ ಮಾಡುತ್ತಾರೆ. ಅಜಿತ್ ಪವಾರ್ ಮತ್ತು ಸುನೇತ್ರಾ ಪವಾರ್ ಅವರಿಗೆ ಜೈ ಮತ್ತು ಪಾರ್ಥ್ ಎಂಬ ಇಬ್ಬರು ಮಕ್ಕಳಿದ್ದಾರೆ ಮತ್ತು ಇಬ್ಬರೂ ಪುತ್ರರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ದೇಶದಲ್ಲಿ ಪರಿಸರ ಸ್ನೇಹಿ ಗ್ರಾಮ ಪರಿಕಲ್ಪನೆಯನ್ನು ನೀಡಿದ್ದರು, ಅದರೊಂದಿಗೆವ ಬಾರಾಮತಿ ಹೈಟೆಕ್ ಟೆಕ್ಸ್ಟೈಲ್ ಪಾರ್ಕ್ ಲಿಮಿಟೆಡ್ನ ಅಧ್ಯಕ್ಷರೂ ಆಗಿದ್ದಾರೆ.
ಅಜಿತ್ ಪವಾರ್ ಆಸ್ತಿ: 2021ರ ಧನತ್ರಯೋದಶಿಯ ದಿನದಂದು ಆದಾಯ ತೆರಿಗೆ ಇಲಾಖೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ನೋಟಿಸ್ ನೀಡಿರುವುದನ್ನು ನೋಡಿದರೆ ಅಜಿತ್ ಪವಾರ್ ಮತ್ತು ಅವರ ಸಂಪತ್ತು ಎಷ್ಟಿದೆ ಎಂಬುದನ್ನು ಅಂದಾಜು ಮಾಡಬಹುದು. ಅಜಿತ್ ಪವಾರ್, ಪಾರ್ಥ್ ಪವಾರ್ ಹಾಗೂ ಜರಂದೇಶ್ವರ್ ಸಕ್ಕರೆ ಕಾರ್ಖಾನೆಗೆ ಸೇರಿದ ಆಸ್ತಿಗಳಿಗೆ ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಲಾಗಿದೆ.
ಇದರಲ್ಲಿ ದಕ್ಷಿಣ ದೆಹಲಿಯಲ್ಲಿರುವ ಸುಮಾರು 20 ಕೋಟಿಯ ಫ್ಲಾಟ್ ಸೇರಿದೆ. ನಿರ್ಮಲ್ ಹೌಸ್ನಲ್ಲಿರುವ ಪಾರ್ಥ್ ಪವಾರ್ ಕಚೇರಿಯ ವೆಚ್ಚ ಸುಮಾರು 25 ಕೋಟಿ. ಜರಂದೇಶ್ವರ ಸಕ್ಕರೆ ಕಾರ್ಖಾನೆಯು ಸುಮಾರು 600 ಕೋಟಿ ರೂ. ಇದಲ್ಲದೇ ಗೋವಾದಲ್ಲಿ 250 ಕೋಟಿ ವೆಚ್ಚದ ನಿಲಯ ಎಂಬ ರೆಸಾರ್ಟ್ ಇತ್ತು. ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾಪ ಆದಾಯ ತೆರಿಗೆ ಇಲಾಖೆಯ ಮುಂದಿತ್ತು.