ಬೆಳಗಾವಿ : ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಇದೀಗ ಇಡೀ ಜಿಲ್ಲೆಯಲ್ಲಿ ಕಾವೇರ ತೊಡಗಿದೆ.
ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಈ ನಡುವೆ ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಅವರು ಪಿಕೆಪಿಎಸ್ ನಿರ್ದೇಶಕರನ್ನು ಹೈಜಾಕ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಯಮಕನಮರಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರು ಜನ ಪಿಕೆಪಿಎಸ್ ನಿರ್ದೇಶಕರಾದ ಅಲ್ಲಪ್ಪ ಹಿರೇಕೋಡಿ, ರಫೀಕ್ ಮದಿಹಳ್ಳಿ, ವಿಲಾಸ ಅಣ್ವೇಕರ, ಶ್ರೀಶೈಲ ಪಟ್ಟಣಶೆಟ್ಟಿ, ಶಿವಲೀಲಾ ವಸ್ತ್ರದ ಮತ್ತು ದೂದಪ್ಪ ಶಿಂತ್ರೆ ಅವರನ್ನು ಕತ್ತಿ ಅವರ ಕಾರ್ಖಾನೆಗೆ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಅವರ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪೊಲೀಸರು ಯಮಖಂಮರಡಿ ಸಿಪಿಐ ಜಾವೇದ್ ಮುಶಾಪುರೆ ಮತ್ತು ಹುಕ್ಕೇರಿ ಸಿಪಿಐ ಮಹಾಂತೇಶ ಬಸಾಪುರೆ ಅವರ ನೇತೃತ್ವದಲ್ಲಿ ಬಾಗೇವಾಡಿ ಬಳಿಯ ಕತ್ತಿ ಒಡೆತನಕ್ಕೆ ಸೇರಿದ ಬಾಗೇವಾಡಿ ಬಳಿಯ ವಿಶ್ವರಾಜ ಶುಗರ್ ಕಾರ್ಖಾನೆಗೆ ಭೇಟಿ ನೀಡಿ ಕೊನೆಗೂ ಅವರನ್ನೆಲ್ಲ ಹೊರಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಮತ್ತು ರಮೇಶ ಕತ್ತಿ ಅವರ ನಡುವೆ ಹೈಡ್ರಾಮಾ ನಡೆಯಿತು.
ಕೊನೆಗೂ ಪೊಲೀಸರು ಅವರನ್ನೆಲ್ಲ ಅವರವರ ಮನೆಗೆ ಕಳಿಸಿಕೊಟ್ಟಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಜಿಲ್ಲೆ ಉಸ್ತುವಾರಿ ಸತೀಶ ಜಾರಕಿಹೊಳಿ ಮತ್ತು ರಮೇಶ ಕತ್ತಿ ನಡುವೆ ಹೋರಾಟ ತೀವ್ರಗೊಂಡಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ : ಪೊಲೀಸ್ ಠಾಣೆವರೆಗೂ ಹೋಯ್ತು ಪ್ರಕರಣ
