ಬೆಳಗಾವಿ :
ಶಾಂತಿಯುತ ಮತದಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಚುನಾವಣಾ ಮಾರ್ಗ ಸೂಚಿಯಂತೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಮಾ.3) ನಡೆದ ವಿಧಾನಸಭೆ ಚುನಾವಣೆ ಕರ್ತವ್ಯ ನಿಯೋಜಿತ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಚುನಾವಣೆ ನಿರ್ವಹಣೆ ದೊಡ್ಡ ಜವಾಬ್ದಾರಿ ಕೆಲಸವಾಗಿದೆ. ಈಗಾಗಲೇ ಹೊಸ ಎಂ.3 ಮಷಿನ್ ಗಳು ಬಂದಿವೆ. ಮುಂಜಾಗ್ರತವಾಗಿ ಮೆಷಿನ್ ಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ಇರಬೇಕು. ಚುನಾವಣಾ ಕರ್ತವ್ಯಕ್ಕೆ ಹೊಸವಾಗಿ ನಿಯೋಜನೆ ಆಗಿರುವವರು ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಮತದಾರಿಗೆ ಮತಗಟ್ಟೆ ಸಂಖ್ಯೆ ಕುರಿತು ಮಾಹಿತಿ ನೀಡಬೇಕು. ನಗರ ಪ್ರದೇಶಗಳಲ್ಲಿ ಹೆಚ್ಚು ಶಾಲೆಗಳು ಇರುವುದರಿಂದ ಮತದಾರರು ಗೊಂದಲಕ್ಕೆ ಒಳಗಾಗಿ ಮತ ಚಲಾವಣೆ ಮಾಡದೆ ಇರಬಹುದು ಹಾಗಾಗಿ ಬಿ.ಎಲ್.ಓ ಗಳಿಂದ ಮಾಹಿತಿ ಪಡೆದು ಮತಗಟ್ಟೆ ಸಂಖ್ಯೆ, ಮಾಹಿತಿ, ಚೀಟಿಯಲ್ಲಿ ಬರೆದುಕೊಟ್ಟು ಮತದಾರರ ಗೊಂದಲ ದೂರ ಮಾಡಬೇಕು ಎಂದು ತಿಳಿಸಿದರು
ನಗರ ಪ್ರದೇಶದಲ್ಲಿ 1500 ಮತಗಳು ಇರುವ ಮತಗಟ್ಟೆ ಹಾಗೂ ಗ್ರಾಮೀಣ ಪ್ರದೇಶದ ಮತಗಟ್ಟೆಯಲ್ಲಿ 1200 ಕ್ಕಿಂತ ಹೆಚ್ಚು ಮತಗಳು ಇದ್ದಲ್ಲಿ ಹೆಚ್ಚುವರಿಯಾಗಿ ಹೊಸ ಮತಗಟ್ಟೆ ಸ್ಥಾಪಿಸಲು ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
ಸೂಕ್ಷ್ಮ ಪ್ರದೇಶಗಳ ಹಾಗೂ ಯಾವುದೇ ಪಕ್ಷದ ಅಭ್ಯರ್ಥಿಗಳಿಂದ ಆಮಿಷ ಹಾಗೂ ದಬ್ಬಾಳಿಕೆಗೆ ಒಳಪಟ್ಟ ಪ್ರದೇಶಗಳಿಗೆ ಭೇಟಿ ನೀಡಿ, ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರಣಕ್ಕೆ ಅಂತಹ ಸ್ಥಳಗಳಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಚುನಾವಣಾ ಪೂರ್ವ ಜವಾಬ್ದಾರಿಗಳು:
ಭಯ ಮುಕ್ತ ಚುನಾವಣೆ ನಡೆಸುವುದಕ್ಕೆ ಭಯ ಪೀಡಿತ ಪ್ರದೇಶ ಹಾಗೂ ವ್ಯಕ್ತಿಗಳನ್ನು ಗುರುತಿಸಿ, ಭೀತಿ ನಕಾಶೆ ತಯಾರಿಸಿ, ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕು.
ಮುಕ್ತ ನ್ಯಾಯಸಮ್ಮತ ಪಾರದರ್ಶಕ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಬೇಕು. ಭಯ ಭೀತ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ, ಜನರಲ್ಲಿ ಭಯ ಹೋಗಲಾಡಿಸಿ, ಮತ ಚಲಾಯಿಸಲು ಜಾಗೃತಿ ಮೂಡಿಸಬೇಕು ಎಂದು ಬಿಮ್ಸ್ ಆಡಳಿತಾಧಿಕಾರಿ ಪ್ರೀತಂ ನಸಲಾಪುರೆ ಅವರು ತರಬೇತಿ ನೀಡಿದರು.
ಸಂಬಂಧಿತ ಮಾರ್ಗ ಅಧಿಕಾರಿಗಳು, ಸಾಮಗ್ರಿ ಯಂತ್ರಗಳ ಲಭ್ಯತೆ, ಜೊತೆಗೆ ಪೊಲೀಸ್ ಬಂದುಬಸ್ತ್ ಇರುವದನ್ನು ಖಾತರಿ ಮಾಡಿಕೊಳ್ಳಬೇಕು.
ಎಲ್ಲಾ ಮತಗಟ್ಟೆಗಳಿಂದ 100 ರಿಂದ 200 ಮೀಟರ್ ಮಾರ್ಕ್ ಮಾಡಿರುವುದನ್ನು ಗಮನಿಸಿ, ಕಾನೂನು ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಮತದಾನ ದಿನದ ಜವಾಬ್ದಾರಿಗಳು:
ಮಾದರಿ ಸದಾಚಾರ ನೀತಿ ಸಹಿಂತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಮತದಾನ ನಡೆಯುವಾಗ ಯಾವುದಾದರೂ ಒಂದು ಮತಗಟ್ಟೆಯಲ್ಲಿ ತೊಂದರೆ ಆದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಯತ್ನಿಸಬೇಕು. ಒಂದು ವೇಳೆ ನಿಯಂತ್ರಣವಾಗದೆ ಇದ್ದಲ್ಲಿ, ಸಂಭಂದಪಟ್ಟ ಅಧಿಕಾರಿಗಳ ಸಲಹೆ, ಸೂಚನೆ ಪಡೆಯಬೇಕು ಎಂದು ಹೇಳಿದರು.
ಸೆಕ್ಟರ್ ಅಧಿಕಾರಿಗಳ ಸ್ಥಾನಮಾನ:
ಮತದಾನಕ್ಕೆ 7 ದಿನಗಳ ಮುಂಚಿತವಾಗಿ ಸೆಕ್ಟರ್ ಅಧಿಕಾರಿಗಳಿಗೆ ವಲಯ ನ್ಯಾಯಾಧಿಕಾರ (ಮ್ಯಾಜಿಸ್ಟ್ರಿಯಲ್) ಅಧಿಕಾರ ನೀಡಲಾಗುವದು. ಸಿ.ಆರ್.ಪಿಸಿ ಸೆಕ್ಷನ್ ಪ್ರಕಾರ 144ರ ಪ್ರಕಾರ ತುರ್ತು ಸನ್ನಿವೇಶ ಉಂಟಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ತಕ್ಷಣ ಆದೇಶವನ್ನು ಸೆಕ್ಟರ್ ಅಧಿಕಾರಿಗಳು ಹೊರಡಿಸಬಹುದು.
ಹೊಸ ಮತಗಟ್ಟೆ ಕುರಿತು ಪ್ರಚಾರ:
ಹೊಸ ಮತಗಟ್ಟೆ ಕುರಿತು ವ್ಯಾಪಕ ಪ್ರಚಾರ ಮಾಡಿ, ಸುಲಭವಾಗಿ ಗುರುತಿಸಲು, ಅಂಚೆ ವಿಳಾಸ, ಸಮೀಪ ಇರುವ ಪ್ರಸಿದ್ಧ ಸ್ಥಳಗಳ ಮಾಹಿತಿ ಬಗ್ಗೆ ದಿನ ದಿನಪತ್ರಿಕೆಗಳಲ್ಲಿ, ರೇಡಿಯೋ ಹಾಗೂ ಸ್ಥಳೀಯ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲು ಕ್ರಮ ವಹಿಸಬೇಕು ಎಂದು ಪ್ರೀತಂ ನಸಲಾಪುರೆ ತಿಳಿಸಿದರು.
ಅದೇ ರೀತಿಯಲ್ಲಿ ಒಬ್ಬ ಅಥವಾ ಒಂದು ಮತದಾರ ಗುಂಪು ತಮ್ಮ ಇಚ್ಛೆಗೆ ವಿರುಧ್ದವಾಗಿ ಭೀತಿ,ಆತಂಕ, ಭಯ ಯಾವುದೇ ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸುವುದನ್ನು ತಡೆದು, ಮುಕ್ತ ನ್ಯಾಯಸಮ್ಮತ ಮತ ಚಲಾವಣೆಯ ಅವಕಾಶ ಕಲ್ಪಿಸಬೇಕು.
ಭೀತಿ ತಡೆ ವರದಿ:
ಸೆಕ್ಟರ್ ಅಧಿಕಾರಿಗಳು ಭೀತಿ ಇರುವ ಪ್ರದೇಶ/ಸಮುದಾಯ, ಮತಗಟ್ಟೆಗಳನ್ನು ಗುರುತಿಸಬೇಕು. ಅನಾವಶ್ಯಕ ಆತಂಕ ಸೃಷ್ಟಿಸುವ ವ್ಯಕ್ತಿಗಳನ್ನು ಗುರುತಿಸಬೇಕು. ಅದೇ ರೀತಿಯಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಕಳೆದ ಚುನಾವಣೆಗಳಲ್ಲಿ ನಡೆದ ಹಿತಕರ ಘಟನೆಗಳನ್ನು, ದೂರುಗಳನ್ನು ಗಮನಿಸಿ ಸಂಬಂಧಿತ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕಾರ್ಯಾಗಾರದಲ್ಲಿ ಪ್ರೀತಂ ನಸಲಾಪುರೆ ಅವರು ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಮಹಾನಗರ ಪಾಲಿಕೆ ಅಧಿಕಾರಿ ರುದ್ರೇಶ್ ಘಾಳಿ, ಬೆಳಗಾವಿ ಉಪ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್, ಬಿಮ್ಸ್ ಸಿಇಓ ಸಯ್ಯದಾ ಬಳ್ಳಾರಿ, ಜಿಲ್ಲಾ ಪಂಚಾಯತ್ ಮುಖ್ಯಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ, ಹಾಗೂ ಚುನಾವಣೆ ಕರ್ತವ್ಯ ಅಧಿಕಾರಿಗಳು ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.