ಬೆಳಗಾವಿ :
ಜಿಲ್ಲೆಯಲ್ಲಿ ಆಗಾಗ ಬಾಲ ಕಾರ್ಮಿಕರು ಕಂಡು ಬರುತ್ತಿದ್ದು, ಹೋಟೆಲ್,ಮಾಲ್, ಅಂಗಡಿ, ಫ್ಯಾಕ್ಟರಿಗಳನ್ನು ನಿರಂತರ ಪರಿಶೀಲನೆ ನಡೆಸಬೇಕು. ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡ ಮಕ್ಕಳನ್ನು ತಕ್ಷಣ ರಕ್ಷಿಸಬೇಕು. ವ್ಯಾಪಕ ದಾಳಿ ನಡೆಸುವ ಮೂಲಕ ಬಾಲ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್, ಕಾರ್ಖಾನೆ ಸೇರಿದಂತೆ ಮುಂತಾದ ವಾಣಿಜ್ಯ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಕಂಡುಬರುತ್ತಿದ್ದು, ಮಕ್ಕಳನ್ನು ರಕ್ಷಿಸುವ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು. ಬಾಲ ಕಾರ್ಮಿಕ ಸಮೀಕ್ಷೆ ಅಥವಾ ದಾಳಿಯಲ್ಲಿ ಪತ್ತೆ ಮಾಡಲಾದ ಮಕ್ಕಳಿಗೆ ಶೀಘ್ರ ಶಿಕ್ಷಣ ಮತ್ತು ವಸತಿ ಕಲ್ಪಿಸಬೇಕು ಎಂದು ತಿಳಿಸಿದರು.
ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಸೂಚನೆ:
ಈಗಾಗಲೇ ಬಾಲ ಕಾರ್ಮಿರಾಗಿ ರಕ್ಷಣೆ ಪಡೆದು, ಮುಖ್ಯವಾಹಿನಿಗೆ ಸೇರಿ ಶಿಕ್ಷಣವನ್ನು ಪೂರೈಸಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಕೈಗೊಳ್ಳಬೇಕು.
ಜೂನ್ 12 ರಂದು ನಡೆಯಲಿರುವ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮದಲ್ಲಿ
ಬಾಲ ಕಾರ್ಮಿಕರಾಗಿ ಕೆಲಸದಿಂದ ಬಿಡುಗಡೆ ಹೊಂದಿ ಮುಖ್ಯವಾಹಿನಿಗೆ ಸೇರಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.75% ಕ್ಕಿಂತ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಸನ್ಮಾನ ಕಾರ್ಯಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ದೇವಸ್ಥಾನಗಳಲ್ಲಿ ನಿಗಾ ವಹಿಸಿ:
ಬಾಲಕಾರ್ಮಿಕ ಮಕ್ಕಳ ರಕ್ಷಣೆಗೆ ನೊಂದಾಯಿತ ಎನ್.ಜಿ.ಓ ಸಂಸ್ಥೆಗಳಿಗೆ ಕೂಡ ಜವಾಬ್ದಾರಿ ವಹಿಸಬೇಕು. ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಕಾನೂನು ಬಾಹಿರ ಚುವಟಿಕೆಗಳಲ್ಲಿ ತೊಡಗಿದ ಮಕ್ಕಳನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.
ದೇವಸ್ಥಾನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಾಧ್ಯತೆಯಿದ್ದು, ನಿರಂತರ ನಿಗಾ ವಹಿಸಬೇಕು. ಎಂದು ಬಾಲಕಾರ್ಮಿಕರ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಜೂ.12 ರಂದು:
ಜೂನ್ 12 ರಂದು ನಡೆಯಲಿರುವ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನವಾಗಿದ್ದು, ಬೆಳಿಗ್ಗೆ 11 ಗಂಟೆಗೆ ಎಲ್ಲ ಸರ್ಕಾರಿ ನೌಕರರು, ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಜ್ಯೋತಿ ಕಾಂತೆ ಅವರು ತಿಳಿಸಿದರು.
ಶಿಕ್ಷಣ ಇಲಾಖೆ ವತಿಯಿಂದ ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸುವ ಕುರಿತು ಅರಿವು ಮೂಡಿಸಲು ಜಿಲ್ಲೆಯ ಪ್ರತಿಯೊಂದು ಶಾಲಾ ಮತ್ತು ಕಾಲೇಜುಗಳ ಹಂತದಲ್ಲಿ ಜೂನ್ 12 ರಂದು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾಕೂಟ ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಬೆಳಗಾವಿ ನಗರ ಪ್ರದೇಶದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಅಂಗನವಾಡಿ ಮೇಲ್ವಿಚಾರಕರು, ಹೋಟೆಲ್ ಮತ್ತು ಫ್ಯಾಕ್ಟರಿ ಮಾಲೀಕರು, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ತಿಳಿಸಲಾಗುವುದು.
ತಾಲೂಕು ಮಟ್ಟದ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನ ಏರ್ಪಡಿಸಲಾಗುವುದು ಎಂದು ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕರಾದ ಜ್ಯೋತಿ ಕಾಂತೆ ಅವರು ತಿಳಿಸಿದರು.
ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ, ಕಾರ್ಮಿಕ ಇಲಾಖೆ ಅಧಿಕಾರಿ ತರುನ್ನಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.