ಜನಜೀವಾಳ ಜಾಲ ಬೆಳಗಾವಿ :
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೆಂಡ ಕಾರಿದ ಘಟನೆ ಇಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕೇವಲ ಟ್ರಕ್ ಹೋಗುವಷ್ಟು ಮಾತ್ರ ದಾರಿ ಮಾಡಿಕೊಡಲಾಗಿದೆ ಆದರೆ, ದುರಾದೃಷ್ಟವಶಾತ್ ಆ ಕಿರಿದಾದ ದಾರಿಯಲ್ಲೇ ಟ್ರಕ್ ಕೆಟ್ಟು ನಿಂತಿದೆ. ಅದರ ಹಿಂದೆಯೂ ಇನ್ನೂ ಹಲವು ಟ್ರಕ್ ಗಳು, ವಾಹನಗಳು ನಿಲುಗಡೆಯಾಗಿದೆ. ಟ್ರಕ್ ಕೆಟ್ಟಿದ್ದರಿಂದ ಬೇರೆ ಟ್ರಕ್ ಗಳಿಗೂ ಮುಂದೆ ಹೋಗಲು ಸ್ಥಳಾವಕಾಶ ಸಿಗಲಿಲ್ಲ.
ಆಗ ಅದೇ ಸಮಯಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅ ಮಾರ್ಗದಲ್ಲೇ ಸಂಚರಿಸುತ್ತಿದ್ದರು. ಏಕಾಏಕಿ ಸಾಲುಗಟ್ಟಿ ನಿಂತ ವಾಹನಗಳ ಸಾಲು ನೋಡಿ ಕಾರಿನಿಂದ ಇಳಿದು ತಮ್ಮ ನೈಜ ಕರ್ತವ್ಯ ನಿರ್ವಹಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿ ಅರಿತ ಜಿಲ್ಲಾಧಿಕಾರಿಯವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹೆದ್ದಾರಿ ದುರಸ್ತಿ ಕಾರ್ಯದ ಸಂದರ್ಭದಲ್ಲಿ ಕ್ರೇನ್ ವ್ಯವಸ್ಥೆ ಇಲ್ಲದೇ ಇರುವುದನ್ನು ತಿಳಿದು ಅಧಿಕಾರಿಗಳ ಮೇಲೆ ಕೆಂಡ ಕಾರಿದರು. ಕೆಲ ಹೊತ್ತು ಸ್ಥಳದಲ್ಲೇ ಮೊಕ್ಕಾಂ ಹೂಡಿದ ಜಿಲ್ಲಾಧಿಕಾರಿ ಒಟ್ಟಾರೆ ವ್ಯವಸ್ಥೆ ಮೇಲೆ ಹದ್ದಿನ ಕಣ್ಣಿಟ್ಟರು. ಇನ್ನು ಮುಂದೆ ಇಂತಹ ಬೇಜವಾಬ್ದಾರಿತನ ಸಹಿಸಲು ಸಾಧ್ಯ ಇಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಒಟ್ಟಾರೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸರಿಯಾದ ಸಮಯಕ್ಕೆ ಆ ಸ್ಥಳಕ್ಕೆ ಹೋಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥೆಯ ದರ್ಶನವಾಯಿತು. ಜಿಲ್ಲಾಧಿಕಾರಿಯವರು ಸ್ವತಃ ಮುಂದೆ ನಿಂತು ಅಧಿಕಾರಿ ವರ್ಗಕ್ಕೆ ಚಳಿ ಬಿಡಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ಜಿಲ್ಲಾಧಿಕಾರಿಗಳು ಬಿಸಿ ಮುಟ್ಟಿಸಿದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರರು ತಮ್ಮ ಬೇಜವಾಬ್ದಾರಿಯ ಕರ್ತವ್ಯ ಲೋಪವನ್ನು ಸರಿಪಡಿಸಿಕೊಂಡಿದ್ದಾರೆ ಎಂದು “ಜನಜೀವಾಳ”ಕ್ಕೆ ತಿಳಿದಿದೆ.