ಚಿಕ್ಕಮಗಳೂರು :ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ.ಚಂದ್ರೇಗೌಡ (87) ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ಇಂದು ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ(ನವೆಂಬರ್ 08) ನಾಳೆ ಮಧ್ಯಾಹ್ನ ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಡಿ.ಬಿ.ಚಂದ್ರೇಗೌಡ ನಿಧನಕ್ಕೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೂರು ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಾನೂನು ಸಚಿವರಾಗಿದ್ದರು. ಕಾಂಗ್ರೆಸ್ ಕಟ್ಟಾಳಾಗಿದ್ದ ಚಂದ್ರೇಗೌಡ ಅವರು ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿಯವರಿಗೆ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಈ ಮೂಲಕ ಅವರು ರಾಷ್ಟ್ರದ ಗಮನ ಸೆಳೆದಿದ್ದರು. ಅದರೆ, ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.