ಚೆನ್ನೈ : ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದಲ್ಲಿನ ಬಿಕ್ಕಟ್ಟಿನ ನಡುವೆ, ಪಕ್ಷದ ಸಂಸ್ಥಾಪಕ ಎಸ್. ರಾಮದಾಸ ಗುರುವಾರ ತಮ್ಮ ಪುತ್ರ ಅನ್ಬುಮಣಿ ರಾಮದಾಸ್ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ…!
ಹಾಗೂ ಪಿಎಂಕೆ ಕಾರ್ಯಕರ್ತರು ಅವರ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವಂತೆ ಸೂಚಿಸಿದ್ದಾರೆ. ರಾಮದಾಸ ಅವರು ಅನ್ಬುಮಣಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದರು. “ಅನ್ಬುಮಣಿ ಎಂಬ ಕಳೆಯನ್ನು ಪಿಎಂಕೆಯಿಂದ ತೆಗೆದುಹಾಕಲಾಗಿದೆ” ಎಂದು ಅವರು ಹೇಳಿದರು. ಆದರೆ ಮಗ ಅನ್ಬುಮಣಿ ರಾಮದಾಸ್ ಇದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಚೆನ್ನೈನ ದಕ್ಷಿಣದಲ್ಲಿರುವ ಥೈಲಾಪುರಂನಲ್ಲಿರುವ ತಮ್ಮ ತೋಟದ ಮನೆಯಲ್ಲಿ ರಾಮದಾಸ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಆಡಳಿತ ಮಂಡಳಿ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮದಾಸ್, ಅನ್ಬುಮಣಿ ಅವರನ್ನು ಪಿಎಂಕೆ ಕಾರ್ಯಾಧ್ಯಕ್ಷ ಸ್ಥಾನದಿಂದ ಮಾತ್ರ ತೆಗೆದುಹಾಕಲಾಗುತ್ತಿಲ್ಲ, ಬದಲಾಗಿ ಪಕ್ಷದಿಂದ ಸಂಪೂರ್ಣವಾಗಿ ಹೊರಹಾಕಲಾಗುತ್ತಿದೆ ಎಂದು ಹೇಳಿದರು. ಅನ್ಬುಮಣಿ ಪಕ್ಷದ ಹಿರಿಯರ ಸಲಹೆಯನ್ನು ಪದೇ ಪದೇ ನಿರ್ಲಕ್ಷಿಸುತ್ತಿದ್ದಾರೆ ಮತ್ತು ತಮ್ಮ ತಂದೆಯ ಸಲಹೆಯನ್ನು ಕೇಳಲು ಸಹ ನಿರಾಕರಿಸುತ್ತಿದ್ದಾರೆ ಎಂದು ಎಸ್.ರಾಮದಾಸ್ ಆರೋಪಿಸಿದ್ದಾರೆ.
ಪಿಎಂಕೆ ಪಕ್ಷದಲ್ಲಿ ತಂದೆ-ಮಗನ ನಡುವೆ ತಿಕ್ಕಾಟಗಳು ತಿಂಗಳುಗಳಿಂದ ನಡೆಯುತ್ತಿತ್ತು. ರಾಮದಾಸ್ ತಮ್ಮನ್ನು ಪಕ್ಷದ ಮುಖ್ಯಸ್ಥರೆಂದು ಘೋಷಿಸಿಕೊಂಡರೂ, ಪಕ್ಷದ ನಿಯಮಗಳ ಪ್ರಕಾರ ತಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಮತ್ತು ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿದ್ದೇನೆ ಎಂದು ಅನ್ಬುಮಣಿ ಸಮರ್ಥಿಸಿಕೊಂಡರು.
ನ್ಯೂಸ್ ಮಿನಿಟ್ ಪ್ರಕಾರ, ರಾಮದಾಸ ಅವರು ಅನ್ಬುಮಣಿ ತಮ್ಮನ್ನು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಮತ್ತು 2004 ರಲ್ಲಿ ಯುಪಿಎ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದು ದೊಡ್ಡ ತಪ್ಪು ಎಂದು ಹೇಳಿದ ನಂತರ ತಂದೆ ಮತ್ತು ಮಗನ ನಡುವಿನ ಜಗಳ ಪ್ರಾರಂಭವಾಯಿತು.
ಮೈತ್ರಿಗಳ ಕುರಿತು ತಮ್ಮ ಮತ್ತು ತಮ್ಮ ಪುತ್ರ ಅನ್ಬುಮಣಿ ನಡುವಿನ ಭಿನ್ನಾಭಿಪ್ರಾಯವನ್ನು ರಾಮದಾಸ ಬಹಿರಂಗಪಡಿಸಿದರು. “2024 ರ ಸಾರ್ವತ್ರಿಕ ಚುನಾವಣೆಗೆ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ನನ್ನ ಉದ್ದೇಶವಾಗಿತ್ತು, ಮತ್ತು ಅನ್ಬುಮಣಿ ಇಪಿಎಸ್ ಜೊತೆ ಮಾತನಾಡಿ ಅದನ್ನು ದೃಢಪಡಿಸಿದರು. ಆದರೆ ಕೊನೆಯ ಕ್ಷಣದಲ್ಲಿ, ಅನ್ಬುಮಣಿ ಮತ್ತು ಅವರ ಪತ್ನಿ ಸೌಮ್ಯ ನನ್ನ ನಿವಾಸಕ್ಕೆ ಬಂದು ನನ್ನ ಪಾದಗಳನ್ನು ಹಿಡಿದು ಬಿಜೆಪಿ ಮೈತ್ರಿಕೂಟಕ್ಕೆ ಸೇರಲು ಒತ್ತಾಯಿಸಿದರು. ನನಗೆ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.