ಬೆಂಗಳೂರು: ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಪಿಂಚಣಿ ದುಡ್ಡಿಗಾಗಿ ಪ್ರತಿ ಯೂನಿಟ್ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಆಗಲಿದೆ. ಪ್ರತಿ ಯೂನಿಟ್ ಬೆಲೆ 36 ಪೈಸೆ ಹೆಚ್ಚಳ ಮಾಡಿ, ಕೆಇಆರ್ಇಸಿ ಆದೇಶಿಸಿದೆ.
ಕೆಪಿಟಿಸಿಎಲ್ (KPTCL) ನೀಡಿದ್ದ ಪ್ರಸ್ತಾವನೆಗೆ ಕೆಇಆರ್ಸಿ ಅಸ್ತು ಎಂದಿದ್ದು ಬೆಸ್ಕಾಂ, ಮೆಸ್ಕಾಂ, ಸೆಸ್ಕ್, ಹೆಸ್ಕಾಂ ಜೆಸ್ಕಾಂ ವಿಭಾಗಗಳಲ್ಲಿ ವಿದ್ಯುತ್ ಬೆಲೆ ಏರಿಕೆ ಆಗಲಿದ್ದು, ಏಪ್ರಿಲ್ 1 ರಿಂದ ಜಾರಿಯಾಗಲಿದೆ.
ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ್ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ಹೀಗಾಗಿ ದರ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.
ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಬುಧವಾರವೇ ಕೆಇಆರ್ಸಿ ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ (ಪಿ & ಜಿ) ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅವಕಾಶ ನೀಡಿ ಆದೇಶ ಪ್ರಕಟಿಸಿದೆ. 2026-27 ಮತ್ತು 2027-28ರ ಆರ್ಥಿಕ ವರ್ಷಕ್ಕೂ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಮುಂದಿನ ವರ್ಷಗಳಿಗೆ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸಬೇಕಾಗುತ್ತದೆ.