*ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್*
ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ.
ಶೃಂಗೇರಿಯಲ್ಲಿ ಅವರು ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಕೇಳಿದಾಗ, “ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ” ಎಂದು ಕಿಡಿಕಾರಿದರು.
*ರವಿಗೆ ಸಾಮಾನ್ಯ ಪರಿಜ್ಞಾನ ಇಲ್ಲ:*
ನಕ್ಸಲರ ಶಸ್ತ್ರಾಸ್ತ್ರ ವಿಚಾರವಾಗಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾರಾದರೂ ಮುಖ್ಯಮಂತ್ರಿಗಳ ಬಳಿ ಬಂದು ಶರಣಾಗುವಾಗ ಯಾರಾದರೂ ಬಂದೂಕು ಹಿಡಿದುಕೊಂಡು ಬರುತ್ತಾರಾ? ರವಿಗೆ ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ಲವೇ? ವೀರಪ್ಪನ್ ಅವರಿಂದ ರಾಜಕುಮಾರ್ ಅವರನ್ನು ಕರೆ ತಂದಾಗ ಬಂದೂಕು ಸಮೇತ ಕರೆತರಲಾಗಿತ್ತೆ? ಈ ವಿಚಾರವನ್ನು ನಿಭಾಯಿಸಲು ಪೊಲೀಸ್ ಇಲಾಖೆ ಇದೆ. ಅವರು ಕೆಲವು ವಿಚಾರಗಳನ್ನು ಗೌಪ್ಯವಾಗಿತ್ತುಕೊಂಡು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಕರ್ತವ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವಂತಿಲ್ಲ. ರಾಜ್ಯವನ್ನು ನಕ್ಸಲ್ ಮುಕ್ತ ಮಾಡಿರುವುದಕ್ಕೆ ಸಂತೋಷಪಡಬೇಕು. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣೆಗೆ ಇನ್ನು ಸಮಯವಿದೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ. ಈಗ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡಿ, ರಾಜ್ಯ ಹಾಗೂ ದೇಶ ಉಳಿಸುವ ಕೆಲಸ ಮಾಡೋಣ” ಎಂದು ತಿರುಗೇಟು ನೀಡಿದರು.