ನವದೆಹಲಿ : ನೂತನವಾಗಿ ಆಯ್ಕೆಯಾದ ಭಾರತದ ಉಪರಾಷ್ಟ್ರಪತಿ ಪಿ. ರಾಧಾಕೃಷ್ಣನ್ ಅವರು (ಸೆಪ್ಟೆಂಬರ್ 12) ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಾರಂಭದಲ್ಲಿ ವಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಹ ಆಹ್ವಾನಿತರಾಗಿದ್ದಾರೆ. ರಾಧಾಕೃಷ್ಣನ್ ಅವರ ಮೊದಲ ಕಾರ್ಯಕ್ರಮ ಅಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ರಾಧಾಕೃಷ್ಣನ್ ಎಲ್ಲಾ ನಾಯಕರನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ರಾಧಾಕೃಷ್ಣನ್ ಮಹಾರಾಷ್ಟ್ರದ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಮನಿರ್ದೇಶಿತರಾಗಿದ್ದ ರಾಧಾಕೃಷ್ಣನ್ ಅವರನ್ನು ಮಂಗಳವಾರ ಭಾರತದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲಾಯಿತು. ತಮ್ಮ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರನ್ನು ಸೋಲಿಸಿದರು.
ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 767 ಮತದಾರರು ಮತ ಚಲಾಯಿಸಿದರು. ಒಟ್ಟು ಮತಗಳಲ್ಲಿ, 15 ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು ಮತ್ತು ಕೇವಲ 752 ಮಾನ್ಯ ಮತಗಳನ್ನು ಮಾತ್ರ ಎಣಿಕೆ ಮಾಡಲಾಯಿತು.
ರಾಧಾಕೃಷ್ಣನ್ 452 ಮತಗಳನ್ನು ಪಡೆದರೆ ಸುದರ್ಶನ ರೆಡ್ಡಿ 300 ಮತಗಳನ್ನು ಪಡದರು. ಇದು ವಿಪಕ್ಷಗಳ ಒಟ್ಟು ಮತಗಳಿಗಿಂತ ಕನಿಷ್ಠ 15 ಮತಗಳು ಕಡಿಮೆ ಎಂದು ಹೇಳಲಾಗಿದೆ.
ಜುಲೈನಲ್ಲಿ ಜಗದೀಪ ಧನಕರ ಅವರ ಹಠಾತ್ ರಾಜೀನಾಮೆಯಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಅನುಭವ ಹೊಂದಿರುವ ರಾಧಾಕೃಷ್ಣನ್ ಅವರನ್ನು ತಮಿಳುನಾಡು ರಾಜಕೀಯದಲ್ಲಿ ಗೌರವಾನ್ವಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಅವರು ಆರ್ಎಸ್ಎಸ್ (RSS) ಸ್ವಯಂಸೇವಕರಾಗಿ ತಮ್ಮ ಸಾರ್ವಜನಿಕ ಜೀವನದ ಪ್ರಯಾಣ ಆರಂಭಿಸಿದ ಅವರು 1974 ರಲ್ಲಿ ಭಾರತೀಯ ಜನ ಸಂಘದ ತಮಿಳುನಾಡು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದರು. ನಂತರ ತಮಿಳುನಾಡಿನ ಕೊಯಮತ್ತೂರ ಕ್ಷೇತ್ರದಿಂದ ಎರಡು ಸಲ ಲೋಕಸಭೆಗೆ ಆಯ್ಕೆಯಾದರು. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಪಾಲರಿಗೂ ಸೇವೆ ಸಲ್ಲಿಸಿದ್ದಾರೆ.