ಚೆನ್ನೈ: ತಮಿಳುನಾಡಿನ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (68) ಅವರು ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಈ ಉನ್ನತ ಸ್ಥಾನಕ್ಕೆ ರಾಜ್ಯದಿಂದ ಆಯ್ಕೆಯಾದ ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಇವರಿಗೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ (1962) ಮತ್ತು ಆರ್. ವೆಂಕಟರಾಮನ್ (1987) ಅವರು ಉಪರಾಷ್ಟ್ರಪತಿಯಾಗಿ ತಮಿಳುನಾಡಿನಿಂದ ಆಯ್ಕೆಯಾಗಿದ್ದರು. ಈ ಇಬ್ಬರೂ ಆನಂತರ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದರು. ಇದೇ ರೀತಿಯ ಅವಕಾಶ ಸಿ.ಆರ್.ರಾಧಾಕೃಷ್ಣನ್ ಅವರಿಗೂ ಲಭಿಸುವುದೇ ಎನ್ನುವುದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅವಧಿ (2027) ಮುಗಿದ ಬಳಿಕವಷ್ಟೇ ತಿಳಿಯಲಿದೆ.
ರಾಧಾಕೃಷ್ಣನ್ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಆಗುವುದಕ್ಕೂ ಮುನ್ನ ಜಾರ್ಖಂಡ್ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗೌವರ್ನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರ್ನಲ್ಲಿ 1957ರ ಮೇ 4ರಂದು ಅವರು ಜನಿಸಿದರು.
16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸ್ವಯಂ ಸೇವಕರಾದರು. ವ್ಯವಹಾರ ಆಡಳಿತದಲ್ಲಿ ಪದವಿ ಪಡೆದ ಅವರು 1974ರಲ್ಲಿ ಭಾರತೀಯ ಜನಸಂಘದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
1996ರಲ್ಲಿ ಅವರು ತಮಿಳುನಾಡಿನ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿ ನೇಮಕ ಆದರು. 1998ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. 1998ರಲ್ಲಿ ಅವರು ಮರು ಆಯ್ಕೆಯಾದರು. ಅವರು ತಮಿಳುನಾಡಿನಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲವಾದ ಕೊಂಗು ವೆಲ್ಲಲಾರ್ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
2004ರಿಂದ 2007ರ ಅವಧಿಯಲ್ಲಿ ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ 93 ದಿನಗಳವರೆಗೆ ನಡೆದ ‘ರಥಯಾತ್ರೆ’ 19000 ಕಿ.ಮೀ. ಕ್ರಮಿಸಿ ಜನಮನ್ನಣೆ ಪಡೆಯಿತು. ಭಯೋತ್ಪಾದನೆ ನಿರ್ಮೂಲನೆ ನದಿಗಳ ಜೋಡಣೆ ಏಕರೂಪ ನಾಗರಿಕ ಸಂಹಿತೆ ಜಾರಿ ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಯಾತ್ರೆಯಲ್ಲಿ ಪ್ರತಿಪಾದಿಸಿದ್ದರು.
ಸಿ.ಪಿ.ರಾಧಾಕೃಷ್ಣನ್– ಆರ್ಎಸ್ಎಸ್ ಕಟ್ಟಾಳು, ಬಿಜೆಪಿ ನಿಷ್ಠಾವಂತ
ಸಿ.ಪಿ.ರಾಧಾಕೃಷ್ಣನ್ ಅವರು
ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಿತು. ಎನ್ಡಿಎಯು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ‘ಇಂಡಿಯಾ’ ಕೂಟವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಆದರೆ ಅವರು ಸೋಲು ಕಂಡಿದ್ದಾರೆ. ರಾಜಕಾರಣ ಮತ್ತು ಆಡಳಿತದ ಸುದೀರ್ಘ ಅನುಭವವಿರುವ ಸಿ.ಪಿ.ರಾಧಾಕೃಷ್ಣನ್ ಅವರ ಪರಿಚಯ ಇಲ್ಲಿದೆ..
ಬಿಜೆಪಿ, ಆರ್ಎಸ್ಎಸ್ ವಲಯದಲ್ಲಿ ‘ಸಿಪಿಆರ್’ ಎಂದೇ ಕರೆಸಿಕೊಳ್ಳುವ, ಮಹಾರಾಷ್ಟ್ರದ ರಾಜ್ಯಪಾಲ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ಜಯಭೇರಿ ಗಳಿಸಿದ್ದಾರೆ. 1957ರ ಮೇ 4ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ತಿರುಪ್ಪೂರ್ನಲ್ಲಿ ಜನಿಸಿರುವ ರಾಧಾಕೃಷ್ಣನ್ ಆರ್ಎಸ್ಎಸ್ ಕಟ್ಟಾಳು, ಬಿಜೆಪಿ ನಿಷ್ಠ. ಸಾರ್ವಜನಿಕ ಜೀವನದಲ್ಲಿ ಐದು ದಶಕಗಳಷ್ಟು ಅನುಭವ ಹೊಂದಿರುವ 68 ವರ್ಷ ವಯಸ್ಸಿನ ರಾಧಾಕೃಷ್ಣನ್ ಅವರನ್ನು ಬೆಂಬಲಿಗರು ‘ತಮಿಳುನಾಡಿನ ವಾಜಪೇಯಿ’ ಎಂದು ಕರೆಯುವುದುಂಟು.
16ರ ಹರೆಯದಲ್ಲೇ ಆರ್ಎಸ್ಎಸ್ ಮತ್ತು ಜನಸಂಘದ ಸಂಪರ್ಕಕ್ಕೆ ಬರುವ ಮೂಲಕ ಸಿಪಿಆರ್ ಅವರ ರಾಜಕೀಯ ಜೀವನದ ಹಾದಿ ತೆರೆದುಕೊಂಡಿತು. ಆ ದಾರಿಯುದ್ದಕ್ಕೂ ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅವರು ಈಗ ಉಪರಾಷ್ಟ್ರಪತಿ ಹುದ್ದೆಗೆ ಏರಿದ್ದಾರೆ. ಎನ್ಡಿಎ ಸಂಸತ್ತಿನಲ್ಲಿ ಬಹುಮತ ಹೊಂದಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತವಾಗಿತ್ತು.
ಪಕ್ಷದಲ್ಲಿ ರಾಧಾಕೃಷ್ಣನ್ ಹೊಣೆಗಾರಿಕೆ ಶುರುವಾಗಿದ್ದು 1974ರಲ್ಲಿ. ತಮಿಳುನಾಡು ರಾಜ್ಯ ಬಿಜೆಪಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕವಾದರು. 1996ರಲ್ಲಿ ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿಯಾದರು. 1998ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ, 1.40 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. 1999ರ ಚುನಾವಣೆಯಲ್ಲೂ ಕೊಯಮತ್ತೂರಿನ ಜನ ಅವರನ್ನು ಆಯ್ಕೆ ಮಾಡಿದರು. ಪ್ರಧಾನಿಯಾಗಿ ಆಯ್ಕೆಯಾಗಿದ್ದ ವಾಜಪೇಯಿ ಅವರು ರಾಧಾಕೃಷ್ಣನ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ತೀರ್ಮಾನಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು ಎಂದು ಹೇಳುತ್ತಾರೆ ಅವರ ಆಪ್ತ ವಲಯದಲ್ಲಿರುವವರು.
ಸಂಸತ್ ಸದಸ್ಯರಾಗಿ ಐದು ವರ್ಷಗಳಲ್ಲಿ ಅವರಿಗೆ ಹಲವು ಜವಾಬ್ದಾರಿಗಳು ಸಿಕ್ಕಿದವು. ಜವಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರಾದರು. ಸರ್ಕಾರಿ ಸ್ವಾಮ್ಯದ ಕಂಪನಿಗಳ ಸಂಸದೀಯ ಸಮಿತಿ ಮತ್ತು ಹಣಕಾಸಿಗೆ ಸಂಬಂಧಿಸಿದ ಸಲಹಾ ಸಮಿತಿಯ ಸದಸ್ಯರಾದರು. ಷೇರುಪೇಟೆ ಹಗರಣದ ತನಿಖೆ ನಡೆಸಿದ್ದ ಸಂಸತ್ತಿನ ವಿಶೇಷ ಸಮಿತಿಯ ಸದಸ್ಯರಲ್ಲಿ ಇವರೂ ಒಬ್ಬರು.
2004ರ ಬಳಿಕ ರಾಧಾಕೃಷ್ಣನ್ ಅವರಿಗೆ ಚುನಾವಣಾ ರಾಜಕೀಯದಲ್ಲಿ ಗೆಲುವು ಒಲಿಯಲಿಲ್ಲ. 2004 ಹಾಗೂ ನಂತರದ ಎರಡು ಲೋಕಸಭಾ ಚುನಾವಣೆಗಳಲ್ಲಿ (2009, 2014) ಕೊಯಮತ್ತೂರಿನಿಂದ ಅವರು ಮತ್ತೆ ಆಯ್ಕೆ ಬಯಸಿದರಾದರೂ, ಜನ ತಿರಸ್ಕರಿಸಿದರು.
ಕೈ ಬಿಡದ ಪಕ್ಷ ನಿಷ್ಠೆ: ಚುನಾವಣೆಯಲ್ಲಿ ಕಹಿ ಉಂಡರೇನಂತೆ? ಸಂಘ ಹಾಗೂ ಪಕ್ಷ ನಿಷ್ಠೆ ಅವರಿಗೆ ಸಿಹಿಯನ್ನೇ ಉಣ್ಣಿಸಿತು. 2004–07ರ ನಡುವೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ತಮಿಳುನಾಡಿನಲ್ಲಿ ಪಕ್ಷ ಸಂಘಟಿಸುವುದಕ್ಕಾಗಿ ಅವರು ನಡೆಸಿದ 19 ಸಾವಿರ ಕಿ.ಮೀ ರಥಯಾತ್ರೆ ರಾಜ್ಯದಲ್ಲಷ್ಟೇ ಅಲ್ಲ; ದೇಶದ ಗಮನವನ್ನೂ ಸೆಳೆಯಿತು. ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆ ನಿವಾರಣೆ ಮತ್ತು ಮಾದಕ ದ್ರವ್ಯ ಪಿಡುಗಿನ ವಿರುದ್ಧ ಆರಂಭಿಸಿದ್ದ ರಥಯಾತ್ರೆ 93ನೇ ದಿನ ಮುಕ್ತಾಯ ಕಂಡಿತು.
ಕೊಚ್ಚಿಯ ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿ 2016ರಲ್ಲಿ ರಾಧಾಕೃಷ್ಣನ್ ನೇಮಕಗೊಂಡರು. ವ್ಯಾವಹಾರಿಕ ಆಡಳಿತದಲ್ಲಿ ಪದವಿ ಶಿಕ್ಷಣ (ಬಿಬಿಎ) ಪಡೆದಿರುವ ಅವರು ಜವಳಿ ಉದ್ಯಮಿಯಾಗಿಯೂ ಗುರುತಿಸಿಕೊಂಡವರು. ಉದ್ಯಮದಲ್ಲಿ ಅವರಿಗಿದ್ದ ಅನುಭವ ನಾರು ಮಂಡಳಿಯ ಅಧ್ಯಕ್ಷರಾದಾಗ ನೆರವಿಗೆ ಬಂತು. ಅವರ ನೇತೃತ್ವದಲ್ಲಿ ಮಂಡಳಿಯ ರಫ್ತು ವಹಿವಾಟು ದಾಖಲೆ ಬರೆಯಿತು .
2020ರಿಂದ 2022ರವರೆಗೆ ಕೇರಳದಲ್ಲಿ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದರು. ಆ ಬಳಿಕ ರಾಧಾಕೃಷ್ಣನ್ ಅವರನ್ನು ಸಾಂವಿಧಾನಿಕ ಹುದ್ದೆ ಅರಸಿಕೊಂಡು ಬಂತು. 2023ರ ಫೆ.18ರಂದು ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡರು. ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ, 2024ರ ಜುಲೈ 31ರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಜೊತೆಗೆ ಸಂಕ್ಷಿಪ್ತ ಅವಧಿಗೆ ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಿದರು.
ಈ ಚುನಾವಣೆಯಲ್ಲಿ ರಾಧಾಕೃಷ್ಣನ್ ಆಯ್ಕೆಯಾಗಿದ್ದು, ಅವರು ದಕ್ಷಿಣ ಭಾರತದಿಂದ ಉಪರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲ ಹಿಂದುಳಿದ ವರ್ಗದ ವ್ಯಕ್ತಿ.
ಆಯ್ಕೆ ಹಿಂದೆ ಬಿಜೆಪಿ ಲೆಕ್ಕಾಚಾರ
ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರ ಹಿಂದೆ ಬಿಜೆಪಿಯ ಕೆಲವು ಲೆಕ್ಕಾಚಾರಗಳಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.ಆರ್ಎಸ್ಎಸ್ನೊಂದಿಗೆ ಹಳಸಿರುವ ಸಂಬಂಧವನ್ನು ಸರಿ ಮಾಡುವ ಉದ್ದೇಶ ಒಂದಾದರೆ, ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ‘ರಾಧಾಕೃಷ್ಣನ್ ಕಳಂಕರಹಿತ ವ್ಯಕ್ತಿತ್ವದವರು’ ಎಂದು ಬಿಂಬಿಸುತ್ತಿರುವ ಎನ್ಡಿಎ ಮುಖಂಡರು, ‘ಆಡಳಿತದಲ್ಲಿ ದೀರ್ಘ ಅನುಭವ ಹೊಂದಿರುವುದರಿಂದ ಸಭಾಪತಿಯಾಗಿ ರಾಜ್ಯಸಭೆಯ ಕಲಾಪವನ್ನು ಸುಗಮವಾಗಿ ನಡೆಸಲು ಅವರಿಗೆ ಸಾಧ್ಯವಾಗಲಿದೆ.