ಬೆಳಗಾವಿ: ಕಾನೂನುಬಾಹಿರವಾಗಿ ಮನೆ ತೆರವುಗೊಳಿಸಿದ ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರ(ಬುಡಾ)ದಿಂದ ನಿವೇಶನ ಹಂಚಿಕೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಮಹತ್ವದ ತೀರ್ಪು ನೀಡಿದೆ.
ಈ ನಿವೇಶನದ ಮೂಲ ಮಾಲಕರಿಗೆ ಜಾಗ ಹಸ್ತಾಂತರಿಸಬೇಕು, ಇಲ್ಲವಾದರೆ ಸದ್ಯದ ಮಾರುಕಟ್ಟೆ ಮೌಲ್ಯದ ಹಣ ನೀಡಬೇಕು ಎಂದು ಆದೇಶಿಸಿದೆ.
ಬೆಳಗಾವಿ ಹನುಮಾನ್ ನಗರದ ರಾಜೇಂದ್ರ ಜ್ಯೋತಿಬಾ ದೇಸಾಯಿ ಅವರಿಗೆ ಸೇರಿದ ನಿವೇಶನದ ಬಗ್ಗೆ ನ್ಯಾಯಾಲಯ ಈಗ ಈ ತೀರ್ಪು ನೀಡಿದೆ. ಅವರು ಕುವೆಂಪು ನಗರದಲ್ಲಿ 22 ಗುಂಟೆ ಜಾಗವನ್ನು 2014ರಲ್ಲಿ ಬುಡಾದಿಂದ ಕಾನೂನುಬಾಹಿರವಾಗಿ ವಶಪಡಿಸಿಕೊಂಡು ನಂತರ 2015 ರಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ದಾರವಾಡ ಹೈಕೋರ್ಟ್ ಪೀಠದಲ್ಲಿ ದೂರು ದಾಖಲು ಮಾಡಿದ್ದರು.
ಇದೀಗ 10 ವರ್ಷಗಳ ನಂತರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಪೂರಕ ಸಾಕ್ಷಾಧಾರಗಳನ್ನು ಪರಿಶೀಲಿಸಿ ಬುಡಾ ಕಾನೂನುಬಾಹಿರವಾಗಿ ನಡೆದುಕೊಂಡಿದೆ ಎಂದು ಪರಿಗಣಿಸಿ ತೀರ್ಪು ನೀಡಿದೆ. ರಾಜೇಂದ್ರ ದೇಸಾಯಿ ಅವರಿಗೆ ಮೂಲ ನಿವೇಶನ ನೀಡಬೇಕು ಅಥವಾ ಸದ್ಯದ ಮಾರುಕಟ್ಟೆ ಮೌಲ್ಯವನ್ನು ಬುಡಾ ಪಾವತಿ ಮಾಡಬೇಕು ಎಂದು ನ್ಯಾಯಾಧೀಶ ಕೃಷ್ಣಕುಮಾರ್ ತೀರ್ಪು ಪ್ರಕಟಿಸಿದ್ದಾರೆ.