ಕಾಸರಗೋಡು :
ಕಾಸರಗೋಡು ಜಿಲ್ಲೆಯ ಆಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕನ್ನಡ ವಿಭಾಗಕ್ಕೆ ಮಲಯಾಳ ಶಿಕ್ಷಕಿ ನೇಮಕ ವಿವಾದಕ್ಕೆ ಸಂಬಂಧಿಸಿದ ಹೋರಾಟಕ್ಕೆ ಈಗ ಕೇರಳ ಹೈಕೋರ್ಟ್ ನಲ್ಲಿ ಕನ್ನಡಿಗರಿಗೆ ಮಹತ್ವದ ಜಯ ಲಭಿಸಿದೆ.
ಮಲಯಾಳಿ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಅರ್ಥೈಸಿಕೊಂಡಿರುವ ನ್ಯಾಯಾಲಯ ಕೂಡಲೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣ ಅವರ ಸ್ಥಾನಕ್ಕೆ ಕನ್ನಡ ಗೊತ್ತಿರುವ ಶಿಕ್ಷಕರನ್ನು ನೇಮಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ.
ಹಲವು ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕ ಸೇವಾ ಆಯೋಗಕ್ಕೆ ಈ ತೀರ್ಪು ಚಾಟಿ ಬೀಸಿದಂತಿದೆ.
ಆಡೂರು ಶಾಲೆಗೆ ಮಲೆಯಾಳಿ ಶಿಕ್ಷಕಿ ನೇಮಕದಿಂದ ಸುಮಾರು ಎರಡು ತಿಂಗಳಿನಿಂದ ಕನ್ನಡ ವಿಭಾಗದ ಮಕ್ಕಳಿಗೆ ಸಮಾಜ ಪಾಠ ವಿಜ್ಞಾನ ಪಾಠ ಇಲ್ಲ ಎಂಬಂತಾಗಿತ್ತು. ಕಳೆದ ವರ್ಷ ಉದುಮ ಮತ್ತು ಹೊಸಕೋಟೆ ಸರಕಾರಿ ಪ್ರೌಢಶಾಲೆಗಳ ಶಾಲೆಗೆ ಇದೇ ರೀತಿ ಶಿಕ್ಷಕಿ ನೇಮಕಗೊಂಡಿದ್ದರು. ಉದುಮ ಮತ್ತು ಆಡೂರು ಶಾಲೆಗಳಿಗೆ ಮಲಯಾಳಿ ಭಾಷಾ ಶಿಕ್ಷಕರ ನೇಮಕವಾದಾಗ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದರು.
ಈಗ ಆಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ತೀರ್ಪನ್ನು ಮಲಯಾಳ ಭಾಷಿಕ ಶಿಕ್ಷಕರು ನೇಮಕಗೊಂಡಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ವಯಿಸುವಂತೆ ವಾದ ಮಂಡಿಸಿದ್ದು ಅಂತಿಮ ತೀರ್ಪು ಬಾಕಿ ಇದೆ ಎಂದು ಕೋರ್ಟ್ ಮೆಟ್ಟಿಲೇರಿದ್ದವರು ತಿಳಿಸಿದ್ದಾರೆ.