ಧಾರವಾಡ ಜಿಲ್ಲೆಯ ಜನರ ಕಷ್ಟ ಹೇಳ ತೀರದು. ಕೆಳಹಂತದ ಕಚೇರಿಗಳು ಇನ್ನಿಲ್ಲದ ಅವ್ಯವಸ್ಥೆ ತಾಣವಾಗಿವೆ. ಈ ನಿಟ್ಟಿನಲ್ಲಿ ನಿವೃತ್ತರ ಸ್ವರ್ಗ, ಶಿಕ್ಷಣ ಕಾಶಿ ಎಂದು ಹೆಸರು ಪಡೆದಿರುವ ಧಾರವಾಡ ಜಿಲ್ಲೆಯ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿ ಈ ಕೂಡಲೇ ಸ್ಪಂದಿಸಬೇಕಾಗಿದೆ.
ಧಾರವಾಡ :
ಧಾರವಾಡ ತಹಸೀಲ್ದಾರ ಕಚೇರಿಯಿಂದ ನಮಗೆ ಸತತವಾಗಿ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರರು ಗಮನ ಹರಿಸಬೇಕು ಎಂದು ವಯೋವೃದ್ಧ ವಕೀಲರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಅವರು ನಿವೇದಿಸಿಕೊಂಡ ಸಮಸ್ಯೆಯ ಸಾರಾಂಶ :
ಸಂಬಂಧಿತ ಸರಕಾರಿ ದಾಖಲೆಗಳಲ್ಲಿ ಆಸ್ತಿಯ ನೋಂದಣಿ ಕೋರ್ಟ್ ಆದೇಶದಂತೆ ಮಾಡುವ ಕುರಿತು ಧಾರವಾಡ ತಹಶೀಲ್ದಾರ ಕಾರ್ಯಾಲಯದಿಂದ ಆದ ವಿಳಂಬ ಮತ್ತು ಮಾನಸಿಕ ಹಿಂಸೆ ಇದಾಗಿದೆ.
ಎಫ್.ಡಿ.ಪಿ. ನಂ. 13/2005 ದಿ: 14/04/2006 ರಂದು ಮಾನ್ಯ ಧಾರವಾಡದ ಮೊದಲನೇ ಹೆಚ್ಚುವರಿ ಹಿರಿಯ ನ್ಯಾಯಾಲಯ ಆದೇಶ ಇದಾಗಿದೆ.
ಡಾ.ಪೂಜಾ ಲಟ್ಟಿ (ಎಮ್ ಡಿ. ಎಸ್) ಹಾಲಿ ವಸತಿ ಎರ್ನಾಕುಲಂ ಕೇರಳದಲ್ಲಿದ್ದು ಮೇಲೆ ತಿಳಿಸಿದ ನ್ಯಾಯಾಲಯದ ಆದೇಶದಂತೆ ನನ್ನ ಪಾಲಿಗೆ ಬೇರೆ ಬೇರೆ ಆಸ್ತಿಗಳು ವಾಟ್ನಿಯ ಸಂಬಂಧದಿಂದ ಬಂದಿರುತ್ತವೆ. ಅವುಗಳ ಪೈಕಿ ಧಾರವಾಡ ಸಪ್ತಾಪೂರ ಗ್ರಾಮದ ಹದ್ದಿಯಲ್ಲಿ ಬರುವ ಸರ್ವೆ ನಂ. 87 ಹಿಸ್ಸಾ ನಂ. 2/ಬ/2/2 ರಲ್ಲಿ ನನಗೆ 01 ಎಕರೆ 08 ಗುಂಟೆ 11. 3/9 ಚದರ ಯಾರ್ಡ್ ಕ್ಷೇತ್ರ ಬಂದಿರುತ್ತದೆ. ನಾನು ದಿ: 30/11/2019 ರಂದು ಸದರೀ ಧಾರವಾಡದ ತಹಶೀಲ್ದಾರ ಇವರಿಗೆ ಅರ್ಜಿ ಸಲ್ಲಿಸಿ ಸಂಬಂಧಿತ ಸರಕಾರಿ ದಾಖಲೆಗಳಲ್ಲಿ ನನಗೆ ಬಂದ ಸದರಿ ಜಮೀನಿನ ಕ್ಷೇತ್ರವನ್ನು ನನ್ನ ಹೆಸರಿಗೆ ಸಂಬಂಧಿದ ಕಡತಗಳಲ್ಲಿ ನಮೂದು ಮಾಡುವಂತೆ ಕೇಳಿದ್ದೆ. ತದನಂತರ 15/04/2020, 14/06/2002 (2 ನೇ ಅರ್ಜಿ) ಸಲ್ಲಿಸಿ ಅವರು ಕೇಳಿದ ಎಲ್ಲ ವಿವರಣೆ ಮತ್ತು ದಾಖಲೆಗಳನ್ನು ಕಳಿಸಿದ್ದೇನೆ. ಆದರೆ ಈವರೆಗೆ ಸದರಿಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಷಯದಲ್ಲಿ ನನ್ನ ತಂದೆ ಮಹಾದೇವ ಲಟ್ಟಿ ಹಿರಿಯ ನ್ಯಾಯವಾದಿಗಳು ಕೂಡ ಸಾಕಷ್ಟು ವೇಳೆ ಸದರೀ ಆಫೀಸಿನಲ್ಲಿ ಸಂಬಂಧಿಸಿದವರನ್ನು ಭೇಟಿಯಾಗಿ ವಿನಂತಿಸಿದರೂ ಅವರಿಂದ ಯಾವುದೇ ತರಹದ ಕ್ರಮವಿಲ್ಲ. ಈ ವಿಷಯದಲ್ಲಿ ಮುಖ್ಯವಾಗಿ ಕೆಲವು ವರ್ಷಗಳ ಹಿಂದೆ ಧಾರವಾಡ ತಹಶೀಲ್ದಾರ ಆಫೀಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುಬ್ಬಳ್ಳಿ ಹೆಸರಿನ ಉಪತಹಶೀಲ್ದಾರ ಮತ್ತು ತದನಂತರ ಬಂಡಿ ಅವರು ಕೂಡಾ ಉಪತಹಶೀಲ್ದಾರ ಎಂದು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅವರನ್ನು ಸಮಕ್ಷಮ ಕಂಡು ಸದರಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲು ವಿನಂತಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಸುಮಾರು 2 ತಿಂಗಳ ಹಿಂದೆ ಸದರಿ ಧಾರವಾಡ ತಹಶೀಲ್ದಾರ ಕಛೇರಿಯಲ್ಲಿ ಬಂಡಿ ಹೆಸರಿನ ಉಪತಹಶೀಲ್ದಾರರು ಕೆಲಸ ನಿರ್ವಹಿಸುತ್ತದ್ದ ಸಮಯದಲ್ಲಿ ಎಷ್ಟು ಕ್ರೂರ ರೀತಿಯಿಂದ ಮತ್ತು ದುಡ್ಡಿಗಾಗಿ ಜನಸಾಮಾನ್ಯರನ್ನು ಯಾವ ರೀತಿಯಿಂದ ಪೀಡಿಸುತ್ತಿದ್ದ ಬಗ್ಗೆ ದಿನಪತ್ರಿಕೆಗಳಲ್ಲಿ ಬಂದ ವಿಷಯ ಎಲ್ಲರಿಗೂ ಗೊತ್ತು. ಆದರೂ ಸದರಿ ಕಛೇರಿಯಲ್ಲಿ ಕೆಲಸ ಮಾಡುವ ಇಂತಹ ದುಷ್ಟ ನೌಕರರ ವಿರುದ್ಧ ತಹಶೀಲ್ದಾರ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ಒಂದು ತಕರಾರು ಅರ್ಜಿಯನ್ನು ಸಲ್ಲಿಸಿದ್ದು ಅದರ ಪ್ರತಿಯನ್ನು ಧಾರವಾಡದ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಗಳು ಧಾರವಾಡ ಇವರಿಗೆ ಕಳಿಸಿ ಯೋಗ್ಯ ಕ್ರಮ ಕೈಗೊಳ್ಳಲು ವಿನಂತಿಸಿದ್ದೆ, ದಿ| 29/11/2022 ರ ಉಲ್ಲೇಖದಂತೆ ಧಾರವಾಡದ ಅಪರ ಜಿಲ್ಲಾಧಿಕಾರಿಗಳು ಅಲ್ಲಿಯ ತಹಶೀಲ್ದಾರ ಇವರಿಗೆ ನಾನು ಸಲ್ಲಿಸಿದ ಅರ್ಜಿಯ ಬಗ್ಗೆ ಯೋಗ್ಯ ಕ್ರಮ ಕೈಗೊಳ್ಳಲು ಆದೇಶವನ್ನಿತ್ತರೂ ಈವರೆಗೆ ಈ ವಿಷಯದಲ್ಲಿ ಯಾವುದೇ ಕ್ರಮವಿಲ್ಲ.
ಮೇಲಿಂದ ಮೇಲೆ ಸರ್ಕಾರದ ಸಂಬಂಧಿಸಿದ ಮಂತ್ರಿಗಳು ಸರಕಾರಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬುದ್ದಿ ಹೇಳಿ ಸರಿಯಾಗಿ ಕೆಲಸ ನಿರ್ವಹಿಸಲು ಹೇಳಿದ ವಿಷಯಗಳು ಸರ್ವೆ ಸಾಮಾನ್ಯ. ದುಡ್ಡಿಲ್ಲದೆ ಯಾವುದೇ ಸರಕಾರಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸಲು ಯಾರೂ ಆಸಕ್ತಿ ತೋರಿಸುತ್ತಿಲ್ಲವೆಂಬ ವಿಷಯ ಬಟಾ ಬಯಲಾಗಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು ಯಾವುದೇ ಸರಕಾರಿ ನೌಕರರಿಗೆ ಜನ ಸಾಮಾನ್ಯರ ಬಗ್ಗೆ ಮನ್ನಣೆ ಮತ್ತು ಬೆಲೆ ಇಲ್ಲ.
ಈ ಮೇಲೆ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ತಂದೆಯವರು ನಿಮಗೆ ವೈಯಕ್ತಿಕವಾಗಿ ತಿಳಿಸಿರುತ್ತಾರೆ. ಈಗ ನಮ್ಮ ತಂದೆಯವರಿಗೆ 78 ವಯಸ್ಸು. ವಯೋಸಹಜ ಕಾಯಿಲೆಗಳಿಂದ ಅವರಿಗೂ ಮೇಲಿಂದ ಮೇಲೆ ಓಡಾಡಲು ಆಗುತ್ತಿಲ್ಲ. ಇದುವರೆಗೆ ಧಾರವಾಡದ ತಹಶೀಲ್ದಾರ ಆಫೀಸ್ ಸಿಬ್ಬಂದಿಯಿಂದ ನಮಗೆ ಎಲ್ಲ ರೀತಿಯ ಮಾನಸಿಕ ಹಿಂಸೆಯಾಗಿದೆ. ಅವರಿಗೆ ನ್ಯಾಯಾಲಯದ ಆದೇಶಕ್ಕೆ ಕವಡೆ ಕಿಮ್ಮತ್ತು ಇಲ್ಲ
ಎಂದು ಅವರು ಸಮಸ್ಯೆಯನ್ನು ವಿವರಿಸಿದ್ದಾರೆ.