ದೆಹಲಿ :
ಆದಿಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಬುಧವಾರ ಸಿನಿಮಾ ನಿರ್ಮಾಪಕರು ಧಾರ್ಮಿಕ ಪಠ್ಯಗಳಿಂದ ದೂರವಿರಬೇಕು ಮತ್ತು ಅವುಗಳ ಬಗ್ಗೆ ಸಿನಿಮಾ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ. ನಿಷೇಧವನ್ನು ಕೋರಿ ಸಲ್ಲಿಸಿದ ಮನವಿಗಳಿಗೆ ಪ್ರತಿಕ್ರಿಯೆಯಾಗಿ ವೈಯಕ್ತಿಕ ಅಫಿಡವಿಟ್ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಗೆ (ಸಿಬಿಎಫ್ಸಿ) ನಿರ್ದೇಶಿಸಿದೆ. ನೀವುಗಳು ಕುರಾನ್ ಹಾಗೂ ಬೈಬಲ್ ವಿಚಾರಗಳನ್ನೂ ಮುಟ್ಟಬಾರದು. ನಾನು ಇಲ್ಲಿ ಒಂದು ಮಾತನ್ನು ನಿಮಗೆ ಸ್ಪಷ್ಟವಾಗಿ ಹೆಳುತ್ತೇನೆ. ಯಾವುದೇ ಒಂದು ಧರ್ಮದ ಅಂಶಗಳನ್ನು ನೀವು ಮುಟ್ಟಲೇಬಾರದು. ಯಾವುದೇ ಧರ್ಮದ ಕುರಿತಾಗಿಯೂ ಕೆಟ್ಟದಾಗಿ ಚಿತ್ರಣ ಮಾಡಬಾರದು. ನಿಮಗೆ ನೆನಪಿರಲಿ ಕೋರ್ಟ್ಗೆ ಯಾವುದೇ ಧರ್ಮ ಅನ್ನೋದು ಇರೋದಿಲ್ಲ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರಿದ್ದ ನ್ಯಾಯಪೀಠ ಹೇಳಿದೆ. ಸಿನಿಮಾ ನಿರ್ಮಾಣ ಮಾಡುವವರು ಹಣವನ್ನು ಮಾಡೋದು ಹೇಗೆ ಅನ್ನೋದರ ಬಗ್ಗೆ ಮಾತ್ರವೇ ಯೋಚನೆ ಮಾಡ್ತಾರೆ ಎಂದು ನ್ಯಾಯಮೂರ್ತಿ ಚೌಹಾಣ್ ಹೇಳಿದರು. ಇದೇ ವೇಳೆ, ಸುಮ್ಮನೆ ಕುರಾನ್ ಬಗ್ಗೆ ಒಂದು ಸಣ್ಣ ಡಾಕ್ಯುಮೆಂಟರಿ ಮಾಡಿದರೆ, ಇಡೀ ದೇಶ ಹೇಗಾಗುತ್ತದೆ ನೋಡಿ ಎಂದು ಎಚ್ಚರಿಸಿದ್ದಾರೆ.
“ನೀವು ಕುರಾನ್ನಲ್ಲಿ ತಪ್ಪು ವಿಷಯಗಳನ್ನು ಚಿತ್ರಿಸುವ ಸಣ್ಣ ಸಾಕ್ಷ್ಯಚಿತ್ರವನ್ನಾದರೂ ನಿರ್ಮಾಣ ಮಾಡಿದರೆ, ಏನಾಗಬಹುದು ಎಂದು ನಿಮಗೆ ಗೊತ್ತಿರಲಿ’ ಎಂದು ನ್ಯಾಯಾಲಯವು ಮೌಖಿಕವಾಗಿ ಟೀಕಿಸಿತು. ಸಾಮಾಜಿಕ ಸೌಹಾರ್ದತೆ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೈಕೋರ್ಟ್ ಹೇಳಿದೆ. “ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು. ಇದು ತಮಾಷೆಯ ವಿಚಾರವಲ್ಲ ”ಎಂದು ಅದು ಹೇಳಿದೆ.
“ರಾಮಾಯಣದ ಹಲವಾರು ಪಾತ್ರಗಳನ್ನು ಪೂಜಿಸಲಾಗುತ್ತದೆ ಮತ್ತು ಅವುಗಳನ್ನು ಚಿತ್ರದಲ್ಲಿ ಹೇಗೆ ಚಿತ್ರಿಸಲಾಗಿದೆ ಅನ್ನೋದನ್ನ ನೋಡಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ. ಜೂನ್ 16 ರಂದು ಚಿತ್ರ ಬಿಡುಗಡೆಯಾಗಿದೆ. ಈವರೆಗೂ ಏನೂ ಆಗಿಲ್ಲ. ಆದರೆ, ಮೂರು ದಿನದ ವಿಚಾರಣೆಯಲ್ಲಿ ಏನಾಗಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ. ಈ ಚಿತ್ರದಿಂದ ತಮಗೆ ನೋವಾಗಿದೆ ಎಂದು ಹಲವರು ಹೇಳಿದ್ದಾರೆ ಎಂದು ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ. “ಕೆಲವರು ಪೂರ್ಣ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಭಗವಾನ್ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ಜಿಯನ್ನು ನಂಬುವವರು ಚಿತ್ರ ವೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದೇ ವೇಳೆ ಕೇಂದ್ರ ಸೆನ್ಸಾರ್ ಮಂಡಳಿ ಸದಸ್ಯರಿಗೂ ಛೀಮಾರಿ ಹಾಕಿದ ಕೋರ್ಟ್, ರಾಮಾಯಣವನ್ನು ಈ ರೀತಿ ಚಿತ್ರಣ ಮಾಡಿದ ಚಿತ್ರಕ್ಕೆ ಪ್ರಮಾಣೀಕರಣ ಮಾಡಿದವರು ಮಹಾನ್ ವ್ಯಕ್ತಿಗಳು ಎಂದು ಹೇಳಿದೆ. ”ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಅರ್ಜಿಯಲ್ಲಿ ಹೇಳಿರುವುದನ್ನು ನಾವು ನಂಬಿದ್ದೇವೆ. ನಿಜವಾಗಿಯೂ ಜನರ ಭಾವನೆಗಳಿಗೆ ಧಕ್ಕೆಯಾಗಿದೆ, ”ಎಂದು ಹೇಳಿದ ನ್ಯಾಯಾಲಯ, “ನಾವು ಇಂದು ಮೌನವಾಗಿದ್ದರೆ, ಏನಾಗುತ್ತದೆ ಎಂದು ನಮಗೆ ತಿಳಿದಿದೆ” ಎಂದು ಹೇಳಿದರು. “ಒಂದು ಚಿತ್ರವು ಭಗವಾನ್ ಶಿವನು ತ್ರಿಶೂಲದೊಂದಿಗೆ ಓಡುತ್ತಿರುವುದನ್ನು (ಪಿಕೆ ಚಿತ್ರದಲ್ಲಿ) ತೋರಿಸಿದೆ. ಅದರಲ್ಲಿ ಭಗವಂತನನ್ನೇ ಗೇಲಿ ಮಾಡಲಾಗಿದೆ. ಇನ್ನು ಮುಂದೆಯೂ ಇದು ಆಗಬಹುದು’ ಎಂದು ನ್ಯಾಯಾಧೀಶರೊಬ್ಬರು ಕೇಳಿದರು.
ಇತ್ತೀಚೆಗಷ್ಟೇ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿಸಲು ತಿದ್ದುಪಡಿ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಶುಕ್ಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ತಿದ್ದುಪಡಿ ಅರ್ಜಿಯು ಶುಕ್ಲಾ ಅವರು ಬರೆದ ಸಂಭಾಷಣೆಗಳನ್ನು ಹಾಸ್ಯಾಸ್ಪದ, ‘ಕೊಳಕು’ ಮತ್ತು ‘ರಾಮಾಯಣ ಯುಗದ ವೈಭವದ ವಿರುದ್ಧ’ ಎಂದು ಉಲ್ಲೇಖಿಸಿ ಆಕ್ಷೇಪಿಸಿದೆ.