ಜನ ಜೀವಾಳ ವಿಶೇಷ : ಬೆಳಗಾವಿ: ನಿಗದಿತ ಗಂಭೀರ ಪ್ರಕರಣದಲ್ಲಿ ಸಿಕ್ಕಿಬೀಳುವ ಕೇಂದ್ರೀಯ ಅಧಿಕಾರಿ ಸಿಬ್ಬಂಧಿಗಳ ಮೇಲೆ ಸ್ಥಳೀಯ ನಾಗರಿಕ ಪೊಲೀಸರಿಗೆ ಸಾಮಾನ್ಯವಾಗಿ ಯಾವುದೇ ತನಿಖಾ ಅಧಿಕಾರಗಳಿಲ್ಲ ಎಂಬುವುದು ಎಲ್ಲರ ಅಂಬೋಣ.
ತಮ್ಮಲ್ಲಿ ಇರುವ ಅಪರಾಧದ ಮಾಹಿತಿಯನ್ನು ಕೇಂದ್ರ ತನಿಖಾ ದಳ(CBI)ಕ್ಕೆ ಇಲ್ಲವೇ ಇತರ ಪ್ರಾಧಿಕಾರಕ್ಕೆ ತುರ್ತು ಸಂದೇಶ ಕಳಿಸಬಹುದಷ್ಟೇ…! ಆದರೆ, ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ನಡೆದ ಸ್ಥಳೀಯ ಪೊಲೀಸರ ನಡೆ ಈಗ ಸಾರ್ವಜನಿಕ ಚರ್ಚೆ ಮತ್ತು ಜಿಜ್ಞಾಸೆಗೆ ಕಾರಣವಾಗಿದೆ.
ಗ್ರಾಮೀಣ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಅಂಕಲಿ ಗ್ರಾಮ ಮೂಲದ ವ್ಯಕ್ತಿಯೊಬ್ಬರು ಕೇಂದ್ರ ಆದಾಯ ತೆರಿಗೆ ಅಧಿಕಾರಿ ವಿರುದ್ಧ ಬೆಳಗಾವಿ ನಗರ ಪೊಲೀಸರಿಗೆ ನೀಡಿದ ಭ್ರಷ್ಟಾಚಾರ ದೂರು ಮತ್ತು ಅದಕ್ಕೆ ವಿವೇಚನೆ ಇಲ್ಲದೇ ಸ್ಥಳೀಯ ಪೊಲೀಸರು ಮಾಡಿದ ಅವಸರದ ಅಪಾಯದ ಅನಾವರಣ ಈಗ ಚರ್ಚೆಯ ಕೇಂದ್ರಬಿಂದು..!!
ರಾಜ್ಯ ಲೋಕಾಯುಕ್ತರು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವ ನೌಕರರು, ಕಾರ್ಪೋರೇಷನ್, ನಿಗಮ-ಮಂಡಳಿ ಹಾಗೂ ಸರಕಾರದ ಅನುದಾನ ಪಡೆಯುವ ಯಾವುದೇ ಸ್ವಾಯತ್ತ ಸಂಸ್ಥೆಗಳ ಮೇಲೆ ಮಾತ್ರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ರೇಡ್/ಬಂಧನ ಮಾಡುವ ಅಧಿಕಾರ ಹೊಂದಿದ್ದಾರಷ್ಟೇ; ಅವರಿಗೂ ಕೂಡ ಕೇಂದ್ರೀಯ ಅಧಿಕಾರಿಗಳ ಮೇಲೆ ಸಾಮಾನ್ಯವಾಗಿ ಮುಗಿಬೀಳುವ ಯಾವುದೇ ಅಧಿಕಾರಗಳಿಲ್ಲ..!!
ಹೀಗಿದ್ದಾಗ ನಗರದ ಸಿವಿಲ್ ಪೊಲೀಸರೇಕೆ ಅತಿರೇಕದ ಅವಸರ ಮಾಡಿದರೋ ಎಂಬ ದಟ್ಟ ಸಾರ್ವಜನಿಕ ಸಂಶಯ ವ್ಯಕ್ತವಾಗಿದೆ.
Prevention of Corruption Act ಅಡಿ ಕ್ರಮ ಕೈಗೊಳ್ಳಬೇಕಾದರೆ ನೇರವಾಗಿ ಡಿಎಸ್ಪಿ ರ್ಯಾಂಕ್ ಅಧಿಕಾರಿಯೇ ಸ್ವತಃ FIR ಮಾಡಿಕೊಂಡು, ಇಬ್ಬರೂ ಸರಕಾರಿ ಅಧಿಕಾರಿ/ಸಿಬ್ಬಂಧಿಯನ್ನು ಪಂಚರನ್ನಾಗಿ ನೇಮಿಸಿಕೊಂಡ ನಂತರವೇ ಅನಿವಾರ್ಯವೆನಿಸಿದರೆ ಮಾತ್ರ ಕಾರ್ಯಾಚರಣೆ ಮಾಡಬಹುದಿತ್ತು..!
ಆದರೆ ದೂರುದಾರನ ಅರ್ಜಿ ಮೇರೆಗೆ ಮಾತ್ರ ಸಿವಿಲ್ ಪೊಲೀಸರು ಯಾವುದೇ FIR ಮುಂಚಿತವಾಗಿ ದಾಖಲಿಸದೆಯೇ ನೇರವಾಗಿ trapಗೆ ಇಳಿದಿದ್ದು wrong interpretation of law ಎಂಬ ಚರ್ಚೆಗೆ ನೂಕಿದೆ.
ಮಾಹಿತಿ ಪ್ರಕಾರ ಶುಕ್ರವಾರ ವಶಕ್ಕೆ ಪಡೆದ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿ ವಿರುದ್ಧ ನಗರದ ಠಾಣೆಯಲ್ಲಿ ‘ಸುಲಿಗೆ’ ಐಪಿಸಿ ಸೆಕ್ಷನ್ 384 ಅಡಿ ಪ್ರಕರಣ(Extortion)ದಾಖಲಿಸಲಾಗಿದೆ.
ಭ್ರಷ್ಟಾಚಾರ ಎನ್ನುವುದು Scheduduled offence ಆಗಿದೆ. ಸರಕಾರಿ ನೌಕರ ಭ್ರಷ್ಟಾಚಾರ ಮಾಡುವಾಗ ಇಲ್ಲವೇ ಭ್ರಷ್ಟಾಚಾರದ ಹಣಕ್ಕೆ ಬೇಡಿಕೆ ಇಟ್ಟಾಗ, ಅದಕ್ಕೆಂದೇ(Perticular), ವಿಶೇಷವಾಗಿ ಭ್ರಷ್ಟಾಚಾರ ನಿಷೇಧ ಕಾಯ್ದೆ ಇರುವಾಗ ‘ಸುಲಿಗೆ’ ಪ್ರಕರಣ ದಾಖಲಿಸುವುದು scheduled offence ನ ಗಂಭೀರತೆ ಮತ್ತು ತೀವ್ರತೆಯನ್ನು ಅವಸರಕ್ಕೆ ಬಿದ್ದು ತಗ್ಗಿಸಿದ ಅಪರಾಧ ಸ್ಥಳೀಯ ಅಧಿಕಾರಿಗಳ ಮೇಲೆಯೇ ಬಂದೆರಗುವ ಚರ್ಚೆ ನಡೆದಿದೆ.
ತನಗೆ ಅಧಿಕಾರ ಇಲ್ಲದಿದ್ದರೂ ಮೂಗು ತೂರಿಸಿ, ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡಿ, ಸಂಬಂಧಿಸಿದ ಕೇಂದ್ರ ಪ್ರಾಧಿಕಾರದ ಅಧಿಕಾರ ಮೊಟಕುಗೊಳಿಸಿ, ಅಪರಾಧಿಗೆ ಆಗಬೇಕಾದ ಶಿಕ್ಷೆ ಪ್ರಮಾಣಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣ ದಾಖಲಿಸಿರುವುದು ಒಟ್ಟಾರೆ ಇಲ್ಲಿಯ ನೋಟ.
ಭ್ರಷ್ಟಾಚಾರಿ ಯಾರಿದ್ದರೂ ಆತನಿಗೆ ಸೂಕ್ತ ಶಿಕ್ಷೆ ಆಗಬೇಕು. ಆದರೆ ಆತನನ್ನು ಪ್ರಶ್ನಿಸಲು, ವಶಕ್ಕೆ ಪಡೆಯಲು, ಆತನಿಗೆ ಸೂಕ್ತ ಕಾನೂನಾತ್ಮಕ ಶಿಕ್ಷೆ ಕೊಡಿಸಲು ನಿಗದಿತ ಪ್ರಾಧಿಕಾರಗಳು ಇರುವಾಗ, ಅಧಿಕಾರವೇ ಇಲ್ಲದವರು ಅಂತಹ ಕೆಲಸ ಮಾಡಬಹುದೇ ಎಂಬುವುದು ಚರ್ಚೆಯ ವಿಷಯ. ಭ್ರಷ್ಟಾಚಾರದ ಆರೋಪ ಬಂದ ನಂತರ trap ಮಾಡಲು ಅದಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸಲು ಸಾಕಷ್ಟು ಸಮಯಾವಕಾಶ ಇರುತ್ತದೆ. ಆದರೆ ಅದು ಆಗಿಲ್ಲ..! ತಾವೇ trap ಮಾಡಲು ಮುಂದಾಗುವ ಮುಂಚೆ FIR ಸಹ ಮಾಡಿಲ್ಲ…!! ಆರೋಪಿತ ಅಧಿಕಾರಿಯನ್ನು ವಶಕ್ಕೆ ಪಡೆದ ನಂತರ ಆತನ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯ್ದೆ ಅಡಿಯೇ ಪ್ರಕರಣ ದಾಖಲಿಸಬೇಕಿತ್ತು; ಅದಾಗಿಲ್ಲ….!!!
ಕಾನೂನಿನ ತಪ್ಪು ಮಧ್ಯಸ್ಥಿಕೆ (Miss Interpretation of Law)ಎನ್ನಬಹುದಾದ ಈ ಪ್ರಕರಣ ಈಗ ಕೇಂದ್ರ ಆದಾಯ ತೆರಿಗೆ ಮತ್ತು ರಾಜ್ಯ ನಾಗರಿಕ ಪೊಲೀಸ್ ನಡುವೆ ಘರ್ಷಣೆ ಉಂಟು ಮಾಡಿದೆ. ನ್ಯಾಯಾಲಯದಲ್ಲಿ ಮುಂದೆ ಇದು ತೀವ್ರ ಚರ್ಚೆ(debate)ಯ ವಿಷಯ ಆಗುವುದಂತೂ ನಿಜ. ಹೀಗಾಗಿ ಜನರ ಚಿತ್ತ ಈಗ ನ್ಯಾಯಾಲಯದ ಪ್ರೊಸಿಡಿಂಗ್ಸ್ ನತ್ತ ನೆಟ್ಟಿದೆ. ಇಡೀ ಪ್ರಕರಣದಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಎಸ್. ಎನ್. ಸಿದ್ದರಾಮಪ್ಪ ಅವರು ಮಾತ್ರ ಮೌನ ವಹಿಸಿದ್ದಾರೆ ಎಂಬುದೇ ಸೋಜಿಗದ ಸಂಗತಿ.