ಬೆಳಗಾವಿ :ಮನೆಗೆ ನುಗ್ಗಿ ಮಕ್ಕಳ್ಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಮೇಲೆ ಅಥಣಿ ಪೊಲೀಸರು ಫೈರಿಂಗ್ ಮಾಡಿ ಇಬ್ಬರು ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಗುರುವಾರ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ರವಿಕಿರಣ ಕಮ್ಲಾಕರ್, ಬಿಹಾರದ ಮೂಲದ ಸದ್ಯ ಮುಂಬೈ ನಿವಾಸಿ ಶಾರುಖ್ ಶೇಖ್ ಮತ್ತು ಕೊಲ್ಲಾಪುರ ಜಿಲ್ಲೆಯ ಸಂಬಾ ಕಾಂಬಳೆ ಬಂಧಿತ ಆರೋಪಿಗಳು.
ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ ಬಡಾವಣೆಯ ವಿಜಯ ದೇಸಾಯಿ ಎಂಬುವರ ಮನೆಗೆ ನುಗ್ಗಿ ಅವರ 4 ಮತ್ತು 3 ವರ್ಷದ ಮಕ್ಕಳನ್ನು ಅಪಹರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ ಮಾರ್ಗ ಮಧ್ಯದಲ್ಲಿ ಅಪಹರಣಕಾರರನ್ನು ಪೊಲೀಸರು ತಡೆಗಟ್ಟಿದ್ದರು. ಈ ವೇಳೆ, ಪೊಲೀಸರು ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಂಧಿತ ಕೊಲ್ಲಾಪುರ ಜಿಲ್ಲೆ ಹಾತ ಕಣಗಲಾ ಗ್ರಾಮದ ಸಂಬಾ ರಾವಸಾಬ ಕಾಂಬಳೆ ಎಂದು ಗುರುತಿಸಲಾಗಿದ್ದ, ಆತನನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಾರ್ವಜನಿಕರಿಂದ ಪ್ರಶಂಸೆ: ಅಥಣಿ ಪೊಲೀಸರ ತುರ್ತು ಕಾರ್ಯಾಚರಣೆಯಿಂದ ಇಬ್ಬರು ಮಕ್ಕಳು ಸುರಕ್ಷಿತವಾಗಿ ಮನೆ ಸೇರಿವೆ. ಪೊಲೀಸರ ಸಕಾಲಿಕ ಕರ್ತವ್ಯಪ್ರಜ್ಞೆಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಲಕರನ್ನು ಪೊಲೀಸರು ತಮ್ಮ ಮಡಿಗೆ ಒಪ್ಪಿಸಿದ್ದರಿಂದ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.ನಮ್ಮ ಮನೆಯಲ್ಲಿ ಇವತ್ತು ಯಾರು ಇರಲಿಲ್ಲ, ನಮ್ಮ ತಾಯಿಯವರು ಒಬ್ಬರೇ ಇದ್ದರು, ನಾನು ಮತ್ತು ನನ್ನ ಹೆಂಡತಿ ಕೆಲಸದ ಮೇಲೆ ಹೊರಗಡೆ ಬಂದಿದ್ದೀವಿ. ನಾನು ಕೂಡ ಇವತ್ತು ಕೆಲಸ ಅಂಗವಾಗಿ ಬೆಳಗಾವಿಯಲ್ಲಿ ಇರುವುದರಿಂದ ಈ ಘಟನೆ ಸಂಭವಿಸಿದೆ. ಯಾರೋ ಗೊತ್ತಿಲ್ಲ ನಮ್ಮ ಮನೆಗೆ ನುಗ್ಗಿ ನಮ್ಮ ಮಕ್ಕಳನ್ನು ಅಪಹರಿಸಿದ್ದಾರೆ, ಸದ್ಯಕ್ಕೆ ನಮಗೆ ಭಯ ಆಗುತ್ತಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ವಿಜಯ್ ದೇಸಾಯಿ ಪ್ರತಿಕ್ರಿಯೆ ನೀಡಿದರು.