ಬೆಳಗಾವಿ ಮಹಾನಗರ ಪಾಲಿಕೆ ಕೇಂದ್ರೀಕೃತಗೊಂಡಿರುವ ಸಚಿವ ಸತೀಶ ಜಾರಕಿಹೊಳಿ ಹಾಗೂ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ನಡುವಿನ ವಿವಾದ ದಿನೇ ದಿನೇ ತಾರಕಕ್ಕೇರಿದೆ. ಸತೀಶ ಜಾರಕಿಹೊಳಿ ಅವರು ಅಭಯ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರ, ಅಧಿಕಾರಿಗಳ ಮೇಲಿನ ದೌರ್ಜನ್ಯ ಮುಂತಾದ ಕಾರಣ ಮುಂದಿಟ್ಟು ಅವರ ಮೇಲೆ ಕಟು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇನ್ನೊಂದಡೆ ಶಾಸಕ ಅಭಯ ಪಾಟೀಲ ಅವರು ಬೆಳಗಾವಿಯಲ್ಲಿ ತಾನು ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಿದರೆ ಆ ಬಗ್ಗೆ ರಾಜ್ಯದಲ್ಲಿ ಅವರು ಪ್ರತಿನಿಧಿಸುವ ಕಾಂಗ್ರೆಸ್ ಸರಕಾರವಿದೆ. ಅವರ ಸರಕಾರ ತನಿಖೆ ನಡೆಸಲು ಸ್ವತಂತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರ ತನಿಖೆ ನಡೆಸಲಿ ಎಂದು ಪ್ರತಿ ಸವಾಲು ಹಾಕುತ್ತಿದ್ದಾರೆ. ಒಟ್ಟಾರೆ ಬೆಳಗಾವಿಯಲ್ಲಿ ಏನಾಗುತ್ತಿದೆ ? ಯಾರದ್ದು ಸತ್ಯ ? ಯಾರದ್ದು ಮಿಥ್ಯಾ ಎಂಬ ಬಗ್ಗೆ ಜನತೆಯಲ್ಲಿ ಗೊಂದಲವುಂಟಾಗಿದೆ.
ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆ ಇದೀಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ನಡುವಿನ ವಿವಾದ ತಾರಕಕ್ಕೇರಿದೆ.
ಮಹಾನಗರ ಪಾಲಿಕೆ ತೆರಿಗೆಗೆ ಸಂಬಂಧಿಸಿ ತಪ್ಪು ಮುದ್ರಣ ಮಾಡಿದೆ ಎಂಬ ಆರೋಪ ಮೇಲ್ನೋಟಕ್ಕೆ ವಿವಾದವನ್ನು ಹುಟ್ಟು ಹಾಕಿದೆ. ಆದರೆ ಇದರ ಹಿಂದೆ ಸತೀಶ ಜಾರಕಿಹೊಳಿ ಹಾಗೂ ಅಭಯ ಪಾಟೀಲ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಬಹಿರಂಗ ವೇದಿಕೆ ಒದಗಿಸಲು ಕಾರಣವಾಗಿದೆ. ಇವರಿಬ್ಬರ ನಡುವಿನ ವಿವಾದ ಕಳೆದ ಕೆಲ ದಿನಗಳಿಂದ ಇಡೀ ಮಹಾನಗರ ಪಾಲಿಕೆಯನ್ನೇ ಬಲಿ ತೆಗೆದುಕೊಳ್ಳುವಂತಿದೆ.
ಒಟ್ಟಾರೆ, ಇದರ ಸತ್ಯಾಸತ್ಯತೆ ಏನು ಎಂಬ ಬಗ್ಗೆ ನಗರದ ಜನತೆ ಗೊಂದಲಕ್ಕೀಡಾಗಿರುವುದು ಕಂಡುಬಂದಿದೆ. ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಪಾಲಿಕೆ ಆಯುಕ್ತರು ಹಾಗೂ ಇತರರ ಮೇಲೆ ಅಕ್ರಮಕ್ಕೆ ಆಗ್ರಹಿಸಿ ಬಿಜೆಪಿಯ ಪಾಲಿಕೆ ಆಡಳಿತ ಠರಾವ್ ಅಂಗೀಕರಿಸಿತ್ತು.
ಆದರೆ ಸಚಿವರು ಮಹಾನಗರ ಪಾಲಿಕೆಯ ಸಿಬ್ಬಂದಿಯ ಬೆನ್ನಿಗೆ ನಿಂತು ಅಭಯ ನೀಡಿದರು. ದಲಿತ ಸಂಘಟನೆಗಳು ಸಹ ಪಾಲಿಕೆ ಆಯುಕ್ತರು, ಸಿಬ್ಬಂದಿಗೆ ಬೆಂಬಲ ಸೂಚಿಸಿದರು.
ಈ ನಡುವೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ನಾಯಕರು ಶುಕ್ರವಾರ ಬೆಳಗಾವಿಗೆ ಆಗಮಿಸಿದ್ದ ರಾಜ್ಯಪಾಲ ತಾವರ್ ಚಂದ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹಸ್ತಕ್ಷೇಪ ನಡೆಸುತ್ತಿದ್ದು ಸುಗಮವಾಗಿ ಆಡಳಿತ ನಡೆಸಲು ಅವರಿಂದ ಅಡಚಣೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ನಾಯಕರು ಶನಿವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹಾನಗರ ಪಾಲಿಕೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿದ್ದರು ಆ ಬಗ್ಗೆ ತನಿಖೆ ನಡೆಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ. ಅವರು ತನಿಖೆ ನಡೆಸಲು ಸ್ವತಂತ್ರರು ಎಂದು ಸರಕಾರಕ್ಕೆ ಪ್ರತಿಸವಾಲು ಒಡ್ಡಿದ್ದಾರೆ.
ಒಟ್ಟಾರೆ ಇದೀಗ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿಯ ಅಭಯ ಪಾಟೀಲ ಅವರ ನಡುವಿನ ವಿವಾದ ದಿನೇ ದಿನೇ ಜಟಿಲವಾಗುತ್ತಾ ಸಾಗಿದ್ದು ಬೆಳಗಾವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಿರುವುದು ಸುಳ್ಳಲ್ಲ.
ಬೆಳಗಾವಿ ಅಭಿವೃದ್ಧಿಗೆ ಗ್ರಹಣ : ತಾರಕಕ್ಕೇರಿದ ಸತೀಶ ಜಾರಕಿಹೊಳಿ-ಅಭಯ ಪಾಟೀಲ ನಡುವಿನ ವಿವಾದ..
