ಮೈಸೂರು: ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದು, ಈ ಮೂರ್ತಿ ನಿರ್ಮಾಣಕ್ಕೆ ಬಳಸಲಾದ ಕೃಷ್ಣಶಿಲೆ ದೊರೆತ ಈ ಸ್ಥಳ ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹಾರೋಹಳ್ಳಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಸದ್ಯ ಈ ಸ್ಥಳ ಭಕ್ತಿಯ ತಾಣವಾಗಿ ಗಮನಸೆಳೆಯುತ್ತಿದ್ದು, ಇದೀಗ ಇಲ್ಲಿ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಜಮೀನಿನ ಮಾಲೀಕ ರಾಮದಾಸ್ ಕುಟುಂಬದವರು ಹೊತ್ತುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಜೆಸಿಬಿ ಯಂತ್ರಗಳ ಮೂಲಕ ಜಮೀನನ್ನು ಸಮತಟ್ಟು ಮಾಡಲಾಗುತ್ತಿದ್ದು, ರಾಮಲಲ್ಲ ಮೂರ್ತಿ ನಿರ್ಮಾಣಕ್ಕೆ ಕೃಷ್ಣಶಿಲೆ ಸಿಕ್ಕ ಸ್ಥಳದಲ್ಲಿದ್ದ ಇತರೆ ಬಂಡೆಗಳನ್ನು ತೆರವುಗೊಳಿಸಿ ದೇಗುಲ ನಿರ್ಮಾಣಕ್ಕೆ ಜಾಗವನ್ನು ಸಿದ್ಧಗೊಳಿಸಲಾಗುತ್ತಿದೆ. ಅಲ್ಲದೇ ಗ್ರಾಮದಿಂದ ದೇವಸ್ಥಾನ ನಿರ್ಮಾಣವಾಗುತ್ತಿರುವ ಜಾಗದವರೆಗೆ ರಸ್ತೆ ನಿರ್ಮಾಣವನ್ನು ಕೂಡ ಮಾಡಲಾಗುತ್ತಿದೆ. ರಾಮಲಲ್ಲ ಮೂರ್ತಿಗೆ ಶಿಲೆ ದೊರೆತ ಸ್ಥಳವನ್ನು ಪವಿತ್ರವೆಂದು ನಂಬಲಾಗುತ್ತಿದ್ದು ಇಲ್ಲಿ ದೇವಾಲಯ ನಿರ್ಮಾಣ ಮಾಡುವ ಮೂಲಕ ನಾಮಸ್ಮರಣೆಗೆ ಸಿದ್ಧತೆಗಳು ಆರಂಭವಾಗಿವೆ.
ಕೋಟ್ಯಂತರ ಭಕ್ತರಿಗೆ ದರ್ಶನ ನೀಡುತ್ತಾ ಬಂದಿರುವ ಅಯೋಧ್ಯೆಯ ರಾಮಲಲ್ಲಾನ ವಿಗ್ರಹಕ್ಕೆ ಕೃಷ್ಣಶಿಲೆಯನ್ನು ಹಾರೋಹಳ್ಳಿಯಿಂದ ಕೊಂಡೊಯ್ದಿದ್ದು, ಹೀಗಾಗಿ ಈ ಮಣ್ಣಿನಲ್ಲಿ ದೈವತ್ವವಿರುವುದನ್ನು ಅರಿತ ಜಮೀನಿನ ಮಾಲೀಕರು ಇಲ್ಲೊಂದು ರಾಮದೇಗುಲ ನಿರ್ಮಾಣ ಮಾಡಲು ವರ್ಷದ ಹಿಂದೆಯೇ ಮನಪೂರ್ವಕ ಒಪ್ಪಿಗೆ ನೀಡಿದ್ದರು. ಅದರಂತೆ ದೇವಾಲಯ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಬರಲಾಗಿತ್ತು. ಅದರಂತೆ ಇದೀಗ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ಕೃಷ್ಣಶಿಲೆ ದೊರೆತಿದ್ದು ಹೇಗೆ?
ಹಾರೋಹಳ್ಳಿಯಲ್ಲಿ ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಟಿ.ದೇವೇಗೌಡರು ಈ ಹಿಂದೆಯೇ ಸಹಕಾರ ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆಗೊಂಡ ವರ್ಷದ ಬಳಿಕ ಪೂಜಾ ಕೈಂಕರ್ಯಗಳೊಂದಿಗೆ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆ ಕಾರ್ಯ ನಡೆದಿತ್ತು. ದೇಶ, ವಿದೇಶಗಳಲ್ಲಿ ಜನ ರಾಮನ ಜಪದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಈ ಸ್ಥಳದಲ್ಲಿ ಪೂಜಾಕೈಂಕರ್ಯಗಳು ನಡೆದಿದ್ದವು.
ಕಳೆದ ವರ್ಷ ರಾಮದಾಸ್ ಅವರ ಸ್ವಚ್ಛಗೊಳಿಸಿ, ಕಲ್ಲನ್ನು ಮೂರು ಭಾಗ ಮಾಡಿ ಹೊರತೆಗೆಯಲಾಗಿತ್ತು. 8ರಿಂದ9 ದಿನಗಳ ಕಾಲ ಏಳೆಂಟು ಜನರು ಕೆಲಸ ಮಾಡಿ, ಕಲ್ಲನ್ನು ಹೊರತೆಗೆದು, 9 ಅಡಿ 8 ಇಂಚು ಕಲ್ಲನ್ನು ರಾಮನ ವಿಗ್ರ ಕೆತ್ತನೆಗೆ 7 ಅಡಿ ಕಲ್ಲನ್ನು ಸೀತಾ ವಿಗ್ರಹ ಕೆತ್ತನೆಗೆ ಕಳುಹಿಸಲಾಗಿತ್ತು. ಭರತ, ಲಕ್ಷ್ಮಣ ಹಾಗೂ ಶತ್ರುಘ್ನ ಮೂರ್ತಿಗಳನ್ನು ಕೆತ್ತನೆ ಮಾಡಲು ಮೂರು ಕಲ್ಲುಗಳನ್ನು ಕಳುಹಿಸಲಾಗಿತ್ತು. ಇದೆಲ್ಲವೂ ಸುಲಭವಾಗಿ ಆಗಿರಲಿಲ್ಲ
ಹಾರೋಹಳ್ಳಿ ಗ್ರಾಮದ ನಿವಾಸಿ ಹನುಮಯ್ಯ ಅವರ ಪುತ್ರ ಹೆಚ್.ರಾಮದಾಸ್ ಅವರಿಗೆ ಸೇರಿದ ಗ್ರಾಮದಿಂದ 2.ಕಿ.ಮೀ ದೂರದ ಸರ್ವೇ ನಂ.176, 177ರ ಮೂರು ಎಕರೆ ಜಮೀನಿನಲ್ಲಿದ್ದ ಕಲ್ಲುಗಳು ವ್ಯವಸಾಯಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಆ ಕಲ್ಲುಗಳನ್ನು ಜೆಸಿಬಿ ಬಳಸಿ ತೆಗೆದು ಹಾಕುವ ತೀರ್ಮಾನಕ್ಕೆ ಬಂದಿದ್ದರು. ಮೇಲ್ನೋಟಕ್ಕೆ ಕಲ್ಲು ಭೂಮಿ ಮೇಲೆ ಚಿಕ್ಕದಾಗಿ ಕಾಣಿಸುತ್ತಿತ್ತಾದರೂ ಜೆಸಿಬಿ ತರಿಸಿ ಮಣ್ಣು ಬಗೆದಾಗ ಬೃಹತ್ ಗಾತ್ರದಲ್ಲಿ ಕಲ್ಲು ಹರಡಿಕೊಂಡಿರುವುದು ಪತ್ತೆಯಾಗಿತ್ತು.
ಭಕ್ತಿಭಾವದ ಕ್ಷೇತ್ರವಾಗಿ ಬದಲಾದ ಹಾರೋಹಳ್ಳಿ
ಮಣ್ಣು ತೆಗೆದಂತೆಲ್ಲ ಅದರ ಗಾತ್ರವೂ ಅರಿವಿಗೆ ಬಂದಿತ್ತು. ಆದರೆ ಇಲ್ಲಿಗೆ ನಿಲ್ಲಿಸುವುದು ಬೇಡ ಹೇಗಾದರೂ ಮಾಡಿ ಕಲ್ಲನ್ನು ತೆಗೆದು ಬಿಡಿ ಎಂದು ಜಮೀನಿನ ಮಾಲೀಕ ರಾಮದಾಸ್ ಅವರು ಜೆಸಿಬಿ ಚಾಲಕ ಶ್ರೀನಿವಾಸ್ ಅವರಿಗೆ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತನೆಗಾಗಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಗಾಗಿ ಹುಡುಕಾಟ ನಡೆಸುತ್ತಿರುವ ವಿಷಯ ಜೆಸಿಬಿ ಚಾಲಕ ಶ್ರೀನಿವಾಸ್ ಅವರ ಕಿವಿಗೆ ಬಿದ್ದಿತು. ಹೀಗಾಗಿ ಅವರು ಪರಿಚಿತ ಶಿಲ್ಪಿಯೂ ಆಗಿದ್ದ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿದರು.
ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಕಂಡು ಬಂದ ಭಾರೀ ಗಾತ್ರದ ಶಿಲೆಯ ಬಗ್ಗೆ ಮಾಹಿತಿ ನೀಡಿದ್ದರು. ಜೆಸಿಬಿ ಚಾಲಕ ಶ್ರೀನಿವಾಸ್ ಅವರ ಮಾತಿನಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ತನ್ನ ಸಹೋದರ ಸೂರ್ಯಪ್ರಕಾಶ್ ಅವರೊಂದಿಗೆ ಹಾರೋಹಳ್ಳಿಗೆ ತೆರಳಿ ನೋಡಿದಾಗ ಅಲ್ಲಿರುವುದು ಅತ್ಯಂತ ವಿಶೇಷವಾದ ಕೃಷ್ಣಶೀಲೆ ಎಂಬುದು ತಿಳಿದು ಬಂದಿತು.
ಕೂಡಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್ನ ಗಮನಕ್ಕೆ ತಂದಿದ್ದು, ಅದರಂತೆ ಅಯೋಧ್ಯೆಯಿಂದ ಆಗಮಿಸಿದ ಗುರುಗಳ ತಂಡ ಕೃಷ್ಣ ಶೀಲೆಯನ್ನು ವೀಕ್ಷಿಸಿ, ಪರಿಶೀಲಿಸಿ ಒಪ್ಪಿಗೆ ಸೂಚಿಸಿತ್ತು. ಆ ನಂತರ ಅಯೋಧ್ಯೆಯಿಂದಲೇ ಬಂದ ವಾಹನ ಎರಡು ಶಿಲೆಯನ್ನು ಕೊಂಡೊಯ್ದಿತ್ತು. ಅದಾದ ಬಳಿಕ ಮತ್ತೆ ಮೂರು ಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿತ್ತು. ಯಾವಾಗ ರಾಮಲಲ್ಲ ಮೂರ್ತಿಯನ್ನು ಹಾರೋಹಳ್ಳಿಯಿಂದ ಕೊಂಡೊಯ್ದ ಶಿಲೆಯಿಂದ ಕೆತ್ತಲಾಗಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಈ ಸ್ಥಳಕ್ಕೆ ಜನ ಭೇಟಿಕೊಡಲಾರಂಭಿಸಿದ್ದರಲ್ಲದೆ, ಇದೊಂದು ಭಕ್ತಿಭಾವ ಕ್ಷೇತ್ರವಾಗಿ ಬದಲಾಗಿತ್ತು. ಮುಂದೆ ದೇಗುಲ ನಿರ್ಮಾಣವಾದರೆ ಅಯೋಧ್ಯೆಯಂತೆ ಹಾರೋಹಳ್ಳಿಯೂ ಭಕ್ತರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.