ಬೆಳಗಾವಿ :
ಕೆಲ ತಿಂಗಳುಗಳಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆಗೆ ಗ್ರಾಸ ಒದಗಿಸಿದ್ದ ಹಾಲಿ ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್. ಟಿ.ಸೋಮಶೇಖರ್ ಹಾಗೂ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಬುಧವಾರ ರಾತ್ರಿ ಬೆಳಗಾವಿಯ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಎಚ್. ವಿಶ್ವನಾಥ್ ವಿಧಾನ ಪರಿಷತ್ ಸದಸ್ಯರಾಗಿ ಆಗಾಗ ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿ ಬಗ್ಗೆ ಒಳಗೊಳಗೆ ಅಸಮಾಧಾನ ಹೊಂದಿರುವ ಶಿವರಾಮ್ ಹೆಬ್ಬಾರ್ ಹಾಗೂ ಎಸ್. ಟಿ. ಸೋಮಶೇಖರ್ ಭಾಗವಹಿಸಿದ್ದು ಈಗ ಅವರು ಸದ್ಯದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆಗೆ ಪುಷ್ಠಿ ಒದಗಿಸಿದೆ.
ಜೊತೆಗೆ ಇವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದಿದ್ದ ಡಿನ್ನರ್ ಪಾರ್ಟಿಗೂ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಲ್ ಪಿ ಸಭೆ :
ಬೆಳಗಾವಿ ಹೊರವಲಯದ ಶೂನ್ಯ ರೆಸಾರ್ಟ್ ನಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೆ ಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್, ಚಲುವರಾಯಸ್ವಾಮಿ, ಬೋಸರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಜಗದೀಶ್ ಶೆಟ್ಟರ್ ಮತ್ತಿತರರು ಭಾಗವಹಿಸಿದ್ದರು.