ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಸ್ವಂತ ಸಾಮರ್ಥ್ಯದಿಂದ ಗೆಲ್ಲಬಹುದು. ಇವೆರಡು ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಯಾವ ಕಾರ್ಯ ತಂತ್ರ ಹೆಣೆಯಬೇಕು ಎಂಬ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ.
ಬೆಳಗಾವಿ :
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಇಂದು ನಡೆದಿದೆ. ಬೆಂಗಳೂರು ನಂತರ ಅತಿ ಹೆಚ್ಚು ಅಂದರೆ 18 ಕ್ಷೇತ್ರಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಈ ಹಿನ್ನಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂದು ಕನಸು ಕಂಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿರುವ 18 ಸ್ಥಾನಗಳಲ್ಲಿ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು, ಪ್ರಚಾರದ ವಿಧಾನ ಹೇಗಿರಬೇಕು ಎಂಬ ಬಗ್ಗೆ ಇಡೀ ದಿನ ಚರ್ಚಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಮಹಿಳಾ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ವಂತ ಸಾಮರ್ಥ್ಯದಿಂದ ಗೆಲುವು ಸಾಧಿಸಬಹುದು. ಆದರೆ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಾವ ಕಾರ್ಯತಂತ್ರ ಹೆಣೆದರೆ ಗೆಲ್ಲಬಹುದು ಎಂಬ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಕಾಂಗ್ರೆಸ್ ಇಷ್ಟರಲ್ಲೇ ಅಂತಿಮಗೊಳಿಸಲಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.