ರಾಯಚೂರು:
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ ಅವರು ತಮ್ಮ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಸೇರ್ಪಡೆ ಆಗಿದ್ದಾರೆ.
ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸಿದ್ದು, ಹುಬ್ಬಳ್ಳಿಗೆ ತೆರಳಿ ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಮಾಜಿ ಸಂಸದರೂ ಆದ ಬಿ.ವಿ. ನಾಯಕ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ಮಾನ್ವಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಬಿ.ವಿ.ನಾಯಕ ಬಿಜೆಪಿ ಸೇರಿದ್ದಾರೆ. ಅವರ ತಂದೆ ಮಾಜಿ ಸಂಸದ ದಿ.ವೆಂಕಟೇಶ ನಾಯಕ ಮನೆತನದವರು ಈವರೆಗೆ ದೇವದುರ್ಗ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದರು. ಬಿ.ವಿ. ನಾಯಕ ಅವರಿಗೆ ಮಾನ್ವಿಯಲ್ಲಿ ಬಿಜೆಪಿ ಟಿಕೆಟ್ ಬಹುತೇಕ ನಿಶ್ಚಿತವಾಗಿದೆ.