ಬೆಳಗಾವಿ :
ಮಾರ್ಚ್ 20 ರಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಬೆಳಗಾವಿ ಮಹಾನಗರಕ್ಕೆ ಆಗಮಿಸುತ್ತಿದ್ದಾರೆ. ಯುವಕರನ್ನು ಗಮನದಲ್ಲಿಟ್ಟುಕೊಂಡು ಅವರು ಬೃಹತ್ ಸಮಾವೇಶ ನಡೆಸಲಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ. ಯುವಕರಿಗೆ ಸ್ಪೂರ್ತಿ ನೀಡುವ ನಿಟ್ಟಿನಲ್ಲಿ ಅವರು ಸಮಾವೇಶ ನಡೆಸಲಿದ್ದು ನಗರದ ಅತ್ಯಂತ ದೊಡ್ಡ ಸಿಪಿಎಡ್ ಮೈದಾನದಲ್ಲಿ ಈ ಬೃಹತ್ ಸಮಾವೇಶ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ. ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎಸಿಸಿ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸರಣಿ ಸಭೆಗಳು ನಡೆಯಲಿವೆ. ಬೆಳಗಾವಿಯಲ್ಲಿ ನಡೆಯುವ ರಾಹುಲ್ ಗಾಂಧಿಯವರ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಡೆಸಲು ರಾಜ್ಯದ ಕಾಂಗ್ರೆಸ್ ಯೋಜನೆ ಸಿದ್ದಪಡಿಸಿದೆ.
ಇದೊಂದು ಬರುವ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ
ಬಹುದೊಡ್ಡ ಸಮಾವೇಶವಾಗಿ ಆಯೋಜಿತವಾಗಲಿದೆ.
ಕಾಂಗ್ರೆಸ್ ಪಕ್ಷದ ವರ್ಚಸ್ವಿ ನಾಯಕ ಹಾಗೂ ಯುವಕರ ಕಣ್ಮಣಿ ರಾಹುಲ್ ಗಾಂಧಿಯವರು ಬೆಳಗಾವಿಯಲ್ಲಿ ಯುವಕರ ಆಶೋತ್ತರಗಳಿಗೆ ಪೂರಕವಾಗಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಕಾಂಗ್ರೆಸ್ ಪಕ್ಷ ಇದೀಗ ಟೊಂಕಕಟ್ಟಿ ನಿಂತಿದೆ. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಕಾಂಗ್ರೆಸ್ ಮುಂದಾಗಿದೆ. ಒಟ್ಟಾರೆ, ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುವ ಸಮಾವೇಶ ಇದಾಗಲಿದೆ.