ಬೆಳಗಾವಿ :
ಕೆ.ಎಲ್.ಇ. ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬೆಳಗಾವಿ ಜಿಲ್ಲೆಯ ಕೆ.ಎಲ್.ಇ. ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ೨೦೨೨-೨೩ನೇ ಸಾಲಿನಲ್ಲಿ ನೀಟ್, ಜೆಇಇ, ಕೆಸಿಇಟಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ದಿನಾಂಕ ೨೬/೦೬/೨೦೨೩ ರಂದು ಜರುಗಿತು.
ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೆ.ಎಲ್.ಇ. ಸಂಸ್ಥೆಯ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಪಿ.ಯು.ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಡಿದ ಅದ್ಭುತವಾದ ಸಾಧನೆಯನ್ನು ಶ್ಲಾಘಿಸಿದರು. ನಮ್ಮ ಸಂಸ್ಥೆಯಲ್ಲಿ ಓದುತ್ತಿರುವ ಒಬ್ಬ ಆಟೋ ಡ್ರೈವರ್ ಮಗಳು ಹಾಗೂ ಒಬ್ಬ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಮಗಳು ರಾಜ್ಯಕ್ಕೆ ರ್ಯಾಂಕ್ ಪಡೆದಿರುವದು ಪ್ರಶಂಸಾರ್ಹ ಹಾಗೂ ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯೆಂದು ನುಡಿದರು.
ಇಂದಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಾರೆ, ಹೀಗಾಗಿ ಪಾಲಕರು ಗಂಡು ಹೆಣ್ಣು ಎನ್ನದೆ ಇಬ್ಬರಿಗೂ ಸಮನಾದ ಪ್ರೊತ್ಸಾಹವನ್ನು ನೀಡಬೇಕು ಎಂದು ನುಡಿದರು. ಕೆ.ಎಲ್.ಇ. ಸಂಸ್ಥೆಯು ನುರಿತ ಶಿಕ್ಷಕರ ಮುಖಾಂತರ ವಿದ್ಯಾರ್ಥಿಗಳನ್ನು ನಿರಂತರ ಅಧ್ಯಯನದಲ್ಲಿ ತೊಡಗಿಸಿ ಅವರಲ್ಲಿರುವ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಸಿದ್ದಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ , ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವ್ಯಕ್ತಿಗತವಾಗಿ ಪ್ರತಿಭೆ ಬೇರೆ ಬೇರೆಯಾಗಿ ಇರುತ್ತದೆ. ಪ್ರತಿಭೆಯನ್ನು ಒಬ್ಬರೊಂದಿಗೆ ಮತ್ತೊಬ್ಬರು ಹೋಲಿಕೆ ಮಾಡಿಕೊಳ್ಳುವದಕ್ಕೆ ಆಗುವುದಿಲ್ಲ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಸಂರಕ್ಷಿಸಿಕೊಳ್ಳಬೇಕು ಹಾಗೂ ಪಾಲಕರು ಮಕ್ಕಳ ಸಾಮರ್ಥ್ಯ ಹಾಗೂ ಗುರಿಯನ್ನು ತಿಳಿದುಕೊಂಡು ಅವರನ್ನು ಪ್ರೊತ್ಸಾಹಿಸಬೇಕು ಎಂದು ನುಡಿದರು.
ಮುಂಬರುವ ದಿನಗಳಲ್ಲಿ ಕೆಎಲ್ಇ ಸಂಸ್ಥೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ, ಕೆಸಿಇಟಿ, ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ನೀಡುವ ಅಕಾಡೆಮಿ ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ನುಡಿದರು.
ರ್ಯಾಂಕ್ ವಿಜೇತೆ ಸಮೃದ್ಧಿ ದೇಸಾಯಿ ಅವರ ತಾಯಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ , ಮೂರು ಜನ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಸವಾಲಿನ ವಿಷಯವಾಗಿತ್ತು. ಇಂತಹ ಸಮಯದಲ್ಲಿ ಕೆಎಲ್ಇ ಸಂಸ್ಥೆಯು ನಮ್ಮ ಮಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ರ್ಯಾಂಕ್ ಪಡೆಯಲು ಸಹಾಯ ಮಾಡಿದ್ದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತ ಕೆ.ಎಲ್.ಇ. ಸಂಸ್ಥೆಯ ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.
ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಜಯಾನಂದ ಎಮ್. ಮುನವಳ್ಳಿ ಹಾಗೂ ಕೆ.ಎಲ್.ಇ. ಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಕಾರ್ಯಕಾರಿ ಮಂಡಳಿಯ ಆಮಂತ್ರಿತ ಸದಸ್ಯ ಎಮ್. ಸಿ. ಕೊಳ್ಳಿ ಉಪಸ್ಥಿತರಿದ್ದರು.
ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯ ಎಸ್.ಜಿ. ನಂಜಪ್ಪನವರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಸಾಧನೆಗೈದ ವಿದ್ಯಾರ್ಥಿಗಳಾದ ಸಮೃದ್ಧಿ ದೇಸಾಯಿ, ಕೃಷ್ಣಾ ಮುರಕುಟೆ, ಎಮ್ ಸುಭಿಕ್ಷಾ, ಪ್ರಿಯಾಂಕಾ ಕುಲಕರ್ಣಿ, ಸತ್ಯಂ ಚೌಗಲೆ ಅನಿಸಿಕೆ ವ್ಯಕ್ತಪಡಿಸಿ, ತಮ್ಮ ಸಾಧನೆಯಲ್ಲಿ ಕೆಎಲ್ಇ ಶೈಕ್ಷಣಿಕ ಸೇವೆಯನ್ನು ನೆನೆದರು.
ಅಮೀಶಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಗಿರಿಜಾ ಹಿರೇಮಠ ವಂದಿಸಿದರು. ವರ್ಷಾ ಭದ್ರಿ ಹಾಗೂ ಶ್ರೀಮತಿ ಗೀತಾ ಲಕ್ಕಣ್ಣವರ ನಿರೂಪಿಸಿದರು.
ನಿಪ್ಪಾಣಿ, ಗೋಕಾಕ, ಚಿಕ್ಕೋಡಿ, ಬೈಲಹೊಂಗಲ ಹಾಗೂ ಬೆಳಗಾವಿಯ ಕೆಎಲ್ಇ ಪದವಿ ಪೂರ್ವ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳು, ಪಾಲಕರು, ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.