ಬೆಂಗಳೂರು : ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗುವ ಮೇಲ್ಪಂಕ್ತಿಯನ್ನು ಎತ್ತಿಹಿಡಿದುವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸದನದ ಘನತೆ, ಗಾಂಭೀರ್ಯ, ಗೌರವ, ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳ್ವತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.
ಅವರು ಇಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಖಾದರ್ ಅವರು ಸಭಾದ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದಸನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ ಎಂದರಲ್ಲದೇ ಹೊಸದಾಗಿ ಆರಿಸಿಬಂದ ಸದಸ್ಯರಿಗೆ ಅಭಿನಂದಿಸಿದರು. ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿಯೂ ತಿಳಿಸಿದರು.
*ಉತ್ಸಾಹಿ, ಸಕ್ರಿಯ ರಾಜಕಾರಣಿ*
ರಾಜಕಾರಣದ ಕುಟುಂಬದಿಂದ ಬಂದಿರುವ ಖಾದರ್ ಅವರು ತಮ್ಮ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾದ ಖಾದರದದ ಅವರು, ಶಾಸಕರು ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2018 ರಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಸದನವೀರ ಪ್ರಶಸ್ತಿಯೂ ದೊರೆತಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ಯು.ಟಿ.ಖಾದರ್ ಅವರು ಮಾದರಿ ಶಾಸಕರಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಉಪವಿರೋಧಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದವರು. ಜಾತ್ಯಾತೀತ ಮನೋಭಾವ ಉಳ್ಳವರು ಎಂದರು.
*ವಿಧಾನಸಭೆಯ ಗುಣಮಟ್ಟ ಉತ್ತಮವಾಗಲಿ*
ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಆಡಬೇಕೆಂಬ ನಿರೀಕ್ಷೆಯನ್ನು ಎಲ್ಲ ಸದಸ್ಯರೂ ಬಯಸುತ್ತಾರೆ. ವಿಧಾನಸಭೆ ಈ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆ ಹೋಗಲಾಡಿಸುವ ಕೆಲಸವನ್ನು ಮಾಡಬೇಕಿದೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ಏಳು ಕೊಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು.
ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಚರ್ಚೆಯಾಗಬೇಕು. ಸದಸನದ ಅಧ್ಯಕ್ಷರ ಸ್ಥಾನಕ್ಕೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಸದಸನದ ಚರ್ಚೆಯಲ್ಲಿ ಅನೇಕ ವಿಚಾರಗಳು ಬರುತ್ತವೆ. ಚರ್ಚೆಯಲ್ಲಿ ಭಾಗವಹಿಸುವಾಗ ಪದಬಳಕೆಯಲ್ಲಿ ಬಹಳ ಎಚ್ಛರಿಕೆ ವಹಿಸಬೇಕು. ಅಸಂವಿಧಾನಾತ್ಮಕ ಪದಬಳಕೆಗೆ ಅವಕಾಶವಿರಬಾರದು. ರಚನಾತ್ಮಾಕವಾದ ಸಲಹೆಗಳನ್ನು ನೀಡಲು ಅವಕಾಶ ಹಾಗೂ ಹಕ್ಕುಗಳಿವೆ ಎಂದರು.
ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕ
ವಿಧಾನಸಭೆಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಇರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ಧರೆ ಬಂಡವಾಳ ಹೂಡಿಕೆಯಾಗುವುದಿಲ್ಲ. ಬಂಡವಾಳ ಹೂಡಿಕೆಯಾಗದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗದಿದ್ದರೆ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕವಾಗಿದೆ ಎಂದರು.
*ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಯು.ಟಿ ಖಾದರ್ ಅವರೇ, ಕರ್ನಾಟಕ ರಾಜ್ಯದ ವಿಧಾನಸಭೆಯ ಇತಿಹಾಸಕ್ಕೆ ನೀವು ಸೇರಿದ್ದೀರಿ. ವೈಯಕ್ತಿಕವಾಗಿ ಹಾಗೂ ಎಲ್ಲಾ ಸದಸ್ಯರು ಹಾಗೂ ಸದಸ್ಯರ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ.
ನಾನು ನಿಮ್ಮ ತಂದೆ ಜತೆ ಶಾಸಕನಾಗಿ ಕೆಲಸ ಮಾಡಿದ್ದೆ. ನಿಮ್ಮನ್ನು ಸೇವಾದಳದ ಕಾರ್ಯಕರ್ತನಾಗಿ, ವಿದ್ಯಾರ್ಥಿ ಘಟಕದ ಕಾರ್ಯಕರ್ತನಾಗಿ, ಶಾಸಕನಾಗಿ, ಮಂತ್ರಿಯಾಗಿ ನೋಡಿದ್ದೇನೆ. ಇಂದು ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆ ಸ್ಥಾನ ಬಹಳ ಶ್ರೇಷ್ಠವಾದುದು. ನಾವು ಮಾಜಿ ಸ್ಪೀಕರ್ ವೈಕುಂಟ ಬಾಳಿಗಾ ಅವರ ಇತಿಹಾಸ ಕೇಳಿದ್ದೇವೆ. ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್, ರಮೇಶ್ ಕುಮಾರ್ ಅವರು ಈ ಸ್ಥಾನದಲ್ಲಿ ಕೂತಿದ್ದರು. ಇವರೆಲ್ಲರೂ ಆಡಳಿತ ಅಥವಾ ವಿರೋಧ ಪಕ್ಷದ ಯುವ ಸದಸ್ಯರನ್ನು ಎಬ್ಬಿಸಿ ಮಾತನಾಡಲು ಹೇಳುತ್ತಿದ್ದರು.
ವಿರೋಧ ಪಕ್ಷದ ನಾಯಕರು ಹೇಳಿದಂತೆ ಅವರು ಮಾತು, ಅಭಿಪ್ರಾಯ ಇರಬೇಕು. ವಿರೋಧ ಪಕ್ಷದವರು ಬಲಿಷ್ಠವಾದಷ್ಟು ನಾವು ಬಲಿಷ್ಠವಾಗಿರುತ್ತೇವೆ. ಅವರು ದುರ್ಬಲರಾದರೆ, ನಾವು ದುರ್ಬಲರಾಗುತ್ತೇವೆ. ನಮ್ಮ ತಪ್ಪುಗಳನ್ನು ಹೆಳುವ ಶಕ್ತಿ ಸಾಮರ್ಥ್ಯ ಅವರಲ್ಲಿ ಇರಲಿ. ಆಗ ನಾವು ತಪ್ಪು ಮಾಡದಂತೆ ಎಚ್ಚರಿಕೆ ವಹಿಸುವಂತಾಗುತ್ತದೆ. ಯಾವುದೇ ತಪ್ಪುಗಳಿಗೆ ಅವಕಾಶ ನೀಡದೇ, ಉತ್ತಮ ಆಡಳಿತ ನೀಡುವುದು ನಮ್ಮ ಗುರಿ.
ನೀವು ಸ್ನೇಹಜೀವಿ, ಮಾನವೀಯತೆಯ ಪ್ರತೀಕ. ಕೋಮುಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ. ಖಾದರ್ ಫರೀದ್ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಎಲ್ಲಾ ಸಮಾಜದ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೀರಿ. ಹಿಜಾಬ್, ಹಲಾಲ್ ಗಲಾಟೆ ಸಮಯದಲ್ಲೂ ನಿಮ್ಮ ನಿಲುವು ದೇಶದ ಹಿತಾಸಕ್ತಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಬದ್ಧವಾಗಿತ್ತು.
ನೀವು ಎಲ್ಲರನ್ನು ವಿಶಾಲ ಹೃದಯದಿಂದ ನೋಡಿದ್ದೀರಿ, ನೀವು ನ್ಯಾಯಧೀಶರ ಸ್ಥಾನದಲ್ಲಿ ಕೂತಿದ್ದು, ನ್ಯಾಯಪೀಠದಿಂದ ಅನ್ಯಾಯ ಆಗಬಾರದು ಎಂಬ ಮಾತಿನಂತೆ, ತಾವು ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಿ. ನಮ್ಮ ತಪ್ಪುಗಳನ್ನು ನೀವು ಸರಿಪಡಿಸಿ. ಕೆಲವರು ಉತ್ಸಾಹದಿಂದ ಅಥವಾ ಆಕ್ರೋಶದಿಂದ ಎಲ್ಲೆ ಮೀರಿ ಮಾತನಾಡಲು ಮುಂದಾಗುತ್ತಾರೆ ಅಂತಹವರನ್ನು ನಿಯಂತ್ರಣ ಮಾಡಿ.
ನಾನು ಆಗಾಗ್ಗೆ ಹೇಳುವಂತೆ ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶ ನಿಮಗೆ ಈ ಸ್ಥಾನದ ಮೂಲಕ ಸಿಕ್ಕಿದೆ. ಈ ಸ್ಥಾನದಲ್ಲಿ ಕೂತಿರುವ ಅನೇಕರು ನಂತರ ಎತ್ತರದ ಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇನೆ. ನೀವು ಕೂಡ ಅತ್ಯುನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಕಾಗೋಡು ತಿಮ್ಮಪ್ಪ ಅವರು ಈ ಸ್ಥಾನದಲ್ಲಿ ಕೂತು ಸರ್ಕಾರವನ್ನು ಬಡಿದೆಬ್ಬಿಸಿ ಸಾಮಾಜಿಕ ಬದ್ಧತೆ ಹಾಗೂ ರಾಜ್ಯದ ರೈತರ ರಕ್ಷಣೆಗೆ ಹೇಗೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು ಎಂಬುದನ್ನು ನೋಡಿದ್ದೇವೆ. ಸರ್ಕಾರದವರಿಗೆ ಒಂದು ವಿರೋಧ ಪಕ್ಷದವರಿಗೆ ಒಂದು ನ್ಯಾಯ ಬೇಡ. ಎಲ್ಲರನ್ನು ಸಮಾನರನ್ನಾಗಿ ನೋಡಿ, ಎಲ್ಲರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಿ. ನೀವು ಐದು ಬಾರಿ ಸತತವಾಗಿ ಆಯ್ಕೆಯಾಗಿದ್ದು, ಈ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ನಿಮಗಿದೆ. ನಿಮ್ಮನ್ನು ಈ ಸ್ಥಾನದವರೆಗೂ ಬೆಳೆಸಿರುವ ನಿಮ್ಮ ಕ್ಷೇತ್ರದ ಜನರಿಗೂ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ನೀವು ಈಗ ಪಕ್ಷಾತೀತರಾಗಿದ್ದೀರಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ. ಸರ್ಕಾರ ಹಾಗೂ ಎಲ್ಲಾ ಸದಸ್ಯರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಿಮ್ಮ ಮುಂದಿರುವ ಗ್ರಂಥವೇ ಖುರಾನ್, ಬೈಬಲ್, ಭಗವದ್ಗೀತೆಯಾಗಿದೆ. ಅದನ್ನು ಇಟ್ಟುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡಿ. ನೀವು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಆ ಸ್ಥಾನ ಎಲ್ಲರಿಗಿಂತಲೂ ದೊಡ್ಡದು.
ನೀವು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ.